ADVERTISEMENT

ಕ್ರೀಡಾ ಪ್ರಶಸ್ತಿಗಿಂತ ಉತ್ತಮ ಆರೋಗ್ಯ ಅತಿ ಮುಖ್ಯ.

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 12:48 IST
Last Updated 12 ಸೆಪ್ಟೆಂಬರ್ 2019, 12:48 IST
ಕ್ರೀಡಾ ಪಟುಗಳಿಗೆ  ಪ್ರಶಸ್ತಿ ಪತ್ರ ವಿತರಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ.
ಕ್ರೀಡಾ ಪಟುಗಳಿಗೆ  ಪ್ರಶಸ್ತಿ ಪತ್ರ ವಿತರಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ.   

ದೇವನಹಳ್ಳಿ: ಪ್ರತಿಯೊಬ್ಬ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಗೆಲುವು ನಿರೀಕ್ಷಿಸುವುದು ಸಹಜವಾದರೂ ಪ್ರಶಸ್ತಿಗಿಂತ ಉತ್ತಮ ಆರೋಗ್ಯ ಅತಿ ಮುಖ್ಯ ಎಂಬುದನ್ನು ಚಿಂತಿಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 2019–20ನೇ ಸಾಲಿನ ತಾಲ್ಲೂಕು ಮಟ್ಟದ 14 ಮತ್ತು 17ವರ್ಷ ವಯೋಮಿತಿ ಬಾಲಕ ಬಾಲಕಿಯರ ಅಥ್ಲೆಟಿಕ್‌ ಕೂಟದಲ್ಲಿ ಅವರು ಮಾತನಾಡಿದರು.

‘ಹುಟ್ಟುವ ಎಳೆ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಎಂದರೆ ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಎಂತಹ ಕಾಳಜಿಯನ್ನು ಇಟ್ಟುಕೊಂಡಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾಂತ್ರಿಕರಣಮಯವಾಗುತ್ತಿರುವ ಜೀವನದಲ್ಲಿ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಮನೆಯಲ್ಲಿ ಅಡುಗೆ ಮಾಡಿ ತಿನ್ನುವಷ್ಟು ವ್ಯವಧಾನ ಕೆಲವು ಕುಟುಂಬಗಳಲ್ಲಿ ಇಲ್ಲ. ರೆಡಿಮೇಡ್ ಆಹಾರ ಪದ್ದತಿ ಹೆಚ್ಚಳ, ಕಲುಷಿತ ವಾತಾವರಣ, ಅಶುದ್ಧ ಕುಡಿಯುವ ನೀರು, ರಸಗೊಬ್ಬರದಿಂದ ಬೆಳೆಯುವ ಧಾನ್ಯ ಮತ್ತು ತರಕಾರಿ ಸೇವನೆಯಿಂದ ಆರೋಗ್ಯ ಹದಗೆಟ್ಟು ಅಕಾಲಿಕ ಮರಣಕ್ಕೆ ಕಾರಣವಾಗುತ್ತಿದೆ. ದೈನಂದಿನ ಚಟುವಟಿಕೆಯಲ್ಲಿ ಆರೋಗ್ಯ ಕಾಯ್ದುಕೊಳ್ಳಲು ನಿರಂತರ ವ್ಯಾಯಾಮ ಅಗತ್ಯ’ ಎಂದು ಹೇಳಿದರು.

ADVERTISEMENT

‘ಕಳೆದ ಸಾಲಿನಲ್ಲಿ 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಅದೇ ರೀತಿ ಈ ಬಾರಿ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆಯಲು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡಿ ಸ್ಪರ್ಧೆಗೆ ಅಣಿಗೊಳಿಸುವ ಗುರುತರ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರು ಮಾಡಬೇಕಾಗಿದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮಾತನಾಡಿ, ‘ಸರ್ಕಾರದಿಂದ ನಡೆಸುವ ಪಂದ್ಯಗಳ ಜೊತೆಗೆ ದೇಸಿ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಅನೇಕ ದುಶ್ಚಟಗಳಿಂದ ದೂರವಿಡಲು ಕ್ರೀಡಾಚಟುವಟಿಕೆ ಸಹಕಾರಿಯಾಗಲಿದೆ. ಗುಣಮಟ್ಟದ ಫಲಿತಾಂಶ ಪಡೆಯಲು ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಂದಿನಿ, ಮಹೇಶ್, ಪುರಸಭೆ ಸದಸ್ಯರಾದ ನಾರಾಯಣಸ್ವಾಮಿ, ಮುನಿಕೃಷ್ಣ, ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ದೈಹಿಕ ಶಿಕ್ಷಣ ಶಿಕ್ಷಕ ಸಂಘ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಲ್ ಚಂದ್ರಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ನಾಗೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜನಾರ್ದನ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಕೆ.ಮುನಿಯಪ್ಪ, ತಾಲ್ಲೂಕು ಸಂಘದ ಅಧ್ಯಕ್ಷ ವೈ.ವಿ.ಚಂದ್ರಶೇಖರ್, ಕಾರ್ಯದರ್ಶಿ ಜಿ.ಶ್ರೀನಿವಾಸ್ ಖಜಾಂಚಿವೆಂಕಟೇಶ್, ಸರ್ಕಾರಿ ನೌಕರರ ಸಂಘ ಜಿಲ್ಲಾ ಕಾರ್ಯದರ್ಶಿ ಆಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.