ADVERTISEMENT

ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ

ದೊಡ್ಡಬಳ್ಳಾಪುರ: ಪರ– ವಿರೋಧದ ಚರ್ಚೆ ಜೋರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:45 IST
Last Updated 2 ಡಿಸೆಂಬರ್ 2022, 4:45 IST
ದೊಡ್ಡಬಳ್ಳಾಪುರ ತಾಲ್ಲಕಿನ ಕೊಡಿಗೇಹಳ್ಳಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಸ್ಥಾಪನೆಯಾಗಿವ ಕೆಂಪೇಗೌಡರ ಪಿಒಪಿ ಪ್ರತಿಮೆ
ದೊಡ್ಡಬಳ್ಳಾಪುರ ತಾಲ್ಲಕಿನ ಕೊಡಿಗೇಹಳ್ಳಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಸ್ಥಾಪನೆಯಾಗಿವ ಕೆಂಪೇಗೌಡರ ಪಿಒಪಿ ಪ್ರತಿಮೆ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊಡಿಗೇಹಳ್ಳಿ ವೃತ್ತದಲ್ಲಿ ಬುಧವಾರ ರಾತ್ರಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ದಿಢೀರನೆ ಸ್ಥಾಪಿಸಿರುವುದಕ್ಕೆ ಪರ ವಿರೋಧದ ಚರ್ಚೆಗೆ ಕಾರಣವಾಗಿದ್ದು, ಗ್ರಾಮದಲ್ಲಿ ಶಾಂತಿಕಾಪಾಡಲು ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಕೊಡಿಗೇಹಳ್ಳಿ ವೃತ್ತದಲ್ಲಿ ಬುಧವಾರ ರಾತ್ರಿ ಒಂದು ಸಮುದಾಯ ನಾಡಪ್ರಭು ಕೆಂಪೇಗೌಡರ ಪಿಒಪಿ ಪ್ರತಿಮೆ ಸ್ಥಾಪಿಸಿದ್ದಾರೆ. ಇದಕ್ಕೆ ಮತ್ತೊಂದು ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ. ಕೆಂಪೇಗೌಡರ ಪಿಒಪಿ ಪ್ರತಿಮೆಗೆ ಹೂವಿನ ಹಾರ ಹಾಗೂ ಪೂಜೆ ಸಲ್ಲಿಸಲು ಬಂದವರಿಗೆ ಪೊಲೀಸರು ಅವಕಾಶ ನೀಡದೆ ವಾಪಸ್ಸು ಕಳುಹಿಸಿದ್ದಾರೆ.

ಕೊಡಿಗೇಹಳ್ಳಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಶತಮಾನಗಳಿಂದಲು ಸಹಭಾಳ್ವೆ ನಡೆಸುತ್ತ ಬಂದಿದ್ದಾರೆ. ಕೆಂಪೇಗೌಡರಂತಹ ಮಹಾನ್‌ ನಾಯಕರ ಪಿಒಪಿ ಪ್ರತಿಮೆಯನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಸ್ಥಾಪನೆ ಮಾಡುವ ಅಗತ್ಯ ಇರಲಿಲ್ಲ. ಎಲ್ಲರ ಒಪ್ಪಿಗೆ, ಸಹಕಾರದೊಂದಿಗೆ ಹಗಲಿನ ವೇಳೆಯಲ್ಲೇ ಉತ್ತಮ ಪ್ರತಿಮೆ ಸ್ಥಾಪನೆ ಮಾಡಬಹುದಿತ್ತು ಎಂದು ಗ್ರಾಮದ ಸಾರ್ವಜನಿಕರು ತಿಳಿಸಿದ್ದಾರೆ.

ADVERTISEMENT

ಡಿವೈಎಸ್‌ಪಿ ನಾಗರಾಜ್‌ ಪರಿಶೀಲನೆ: ಪ್ರತಿಮೆ ಸ್ಥಾಪನೆ ಮಾಡಿರುವ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದ ಎನ್ನುವ ಗೊಂದಲ ನಿರ್ಮಾಣವಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ನಾಗರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಸ್ಥಳದ ಬಗ್ಗೆ ಗೊಂದಲ: ಕೆಂಪೇಗೌಡ ಪಿಒಪಿ ಪ್ರತಿಮೆ ಸ್ಥಾಪಿಸಿರುವ ಜಾಗ ಹೆದ್ದಾರಿಗೆ ಸೇರುತ್ತದೋ, ಇಲ್ಲವೊ ಎನ್ನವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವರದಿಯ ನಂತರ ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದುಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮುನಿಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.