ADVERTISEMENT

ತೆರಿಗೆ ಪದ್ಧತಿಯ ಜ್ಞಾನ ಅಗತ್ಯ

ಬೆಂಗಳೂರಿನ ಬಿಎಚ್‍ಇಎಲ್‍ನ ಚಾರ್ಟೆಡ್ ಅಕೌಂಟೆಂಟ್ ಪಿ.ಮಾಲಾ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:15 IST
Last Updated 21 ಫೆಬ್ರುವರಿ 2020, 20:15 IST
ಬಿಎಚ್‍ಇಎಲ್‍ನ ಚಾರ್ಟೆಡ್ ಅಕೌಂಟೆಂಟ್ ಪಿ.ಮಾಲಾ ಅವರನ್ನು ಅಭಿನಂದಿಸಲಾಯಿತು
ಬಿಎಚ್‍ಇಎಲ್‍ನ ಚಾರ್ಟೆಡ್ ಅಕೌಂಟೆಂಟ್ ಪಿ.ಮಾಲಾ ಅವರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ‘ತೆರಿಗೆ ಪಾವತಿ ಮತ್ತು ರಿಟರ್ನ್ ಸಲ್ಲಿಕೆ ವಿಚಾರದಲ್ಲಿ ಹೊಸ ನಿಯಮಾವಳಿಗಳು ಜಾರಿಗೆ ಬರುತ್ತಿದ್ದು, ಜಿಎಸ್‍ಟಿ ಸೇರಿದಂತೆ ವಿವಿಧ ಹಂತದ ತೆರಿಗೆ ಪದ್ಧತಿಗಳ ಸಾಮಾನ್ಯ ಜ್ಞಾನ ಹೊಂದಿರುವುದು ಅತ್ಯಗತ್ಯ’ ಎಂದು ಬೆಂಗಳೂರಿನ ಬಿಎಚ್‍ಇಎಲ್‍ನ ಚಾರ್ಟೆಡ್ ಅಕೌಂಟೆಂಟ್ (ತೆರಿಗೆ ನಿರ್ವಹಣೆ) ಪಿ.ಮಾಲಾ ಹೇಳಿದರು.

ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಲ್ಲಿ ನಡೆದ ಸಾಮಾನ್ಯ ಆದಾಯ ತೆರಿಗೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ತೆರಿಗೆ ನೀತಿಗಳ ಬಗ್ಗೆ ಅರಿವು ಹೊಂದುವುದರ ಜತೆಗೆ ನೇರ ಮತ್ತು ಪರೋಕ್ಷ ತೆರಿಗೆಗಳ ಸ್ವರೂಪವನ್ನು ತಿಳಿದಿರುವುದು ಅಗತ್ಯ. ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ತೆರಿಗೆ ಮಿತಿಯನ್ನು ಹೆಚ್ಚಳ ಮಾಡುವ ಜತೆಗೆ ವಿನಾಯಿತಿಗಳನ್ನು ಕಡಿತಗೊಳಿಸುವ ನಿರ್ಣಯವನ್ನು ಸರ್ಕಾರ ಪ್ರಕಟಿಸಿದೆ. ತೆರಿಗೆ ಪಾವತಿದಾರರು ಇದಕ್ಕೆ ಸಂಬಂಧಪಟ್ಟ ನಿಯಮಾವಳಿಗಳನ್ನು ಅರಿತುಕೊಳ್ಳುವುದು ಮುಖ್ಯ’ ಎಂದರು.

ADVERTISEMENT

‘ಆದಾಯ ತೆರಿಗೆ ಸೇರಿದಂತೆ ನಾವು ಪಾವತಿ ಮಾಡುವ ಹಲವು ತೆರಿಗೆಗಳು ದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ನಿಗಧಿತ ಗಡುವಿನ ಒಳಗೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದಿದ್ದರೆ, ತೆರಿಗೆ ವೆಚ್ಚದ ಮೇಲೆ ಬಡ್ಡಿ ವಿಧಿಸುವ ಅವಕಾಶವಿದೆ. ಅದೇ ರೀತಿ ಟಿಡಿಎಸ್ ಇತ್ಯಾದಿಗಳ ಮರುಪಾವತಿಗೆ ಇರುವ ನಿಬಂಧನೆಗಳನ್ನು ರಿಟರ್ನ್ ಸಲ್ಲಿಕೆಯ ಮೊದಲೇ ಅರಿತಿರಬೇಕು’ ಎಂದರು.

ಸಂವಾದ: ವಿದ್ಯಾರ್ಥಿಗಳೊಂದಿಗೆ ತೆರಿಗೆ ಪದ್ಧತಿ ಸುಧಾರಣೆಗಳು ಹಾಗೂ ಪ್ರಸಕ್ತ ಬೆಳವಣಿಗೆಗಳ ಕುರಿತು ಸಂವಾದ ನಡೆಯಿತು. ವಿದ್ಯಾರ್ಥಿಗಳು ಪ್ರಶ್ನೋತ್ತರದಲ್ಲಿ ಪಾಲ್ಗೊಂಡರು.

ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್ ಹಾಗೂ ವಾಣಿಜ್ಯ-ನಿರ್ವಹಣಾ ವಿಭಾಗದ ಪ್ರಾಧ್ಯಾಪಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.