ADVERTISEMENT

ಆನೇಕಲ್ | 'ಕೋಲೆ ಬಸವ ಜನಾಂಗಕ್ಕೆ ಅನ್ಯಾಯ ಆಗದಿರಲಿ'

ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:40 IST
Last Updated 10 ಅಕ್ಟೋಬರ್ 2025, 1:40 IST
ಆನೇಕಲ್ ತಾಲ್ಲೂಕಿನ ರಾಯಸಂದ್ರ ಗ್ರಾಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಮತ್ತು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಅವರು ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು
ಆನೇಕಲ್ ತಾಲ್ಲೂಕಿನ ರಾಯಸಂದ್ರ ಗ್ರಾಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಮತ್ತು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಅವರು ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು   

ಆನೇಕಲ್:  ತಾಲ್ಲೂಕಿನ ರಾಯಸಂದ್ರದ ಸರ್ವೆ ನಂ.91ರಲ್ಲಿ ಕೋಲೆ ಬಸವ ಜನಾಂಗದವರು ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆಯಡಿ ಮೀಸಲಿಟ್ಟಿದ್ದ 1.2ಎಕರೆ ಜಮೀನು ಒತ್ತುವರಿ ಮತ್ತು ತಮ್ಮ ಜಾಗಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳೆಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಚೌಧರಿ ಭೇಟಿ ಮಾಡಿ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿ, ರಾಯಸಂದ್ರದಲ್ಲಿ ಗ್ರಾಮದಲ್ಲಿ ಕೋಲೆ ಬಸವ ಸಮುದಾಯದವರಿಗೆ ಮೀಸಲಿಟ್ಟಿದ್ದ ಜಾಗದ ಒತ್ತುವರಿ ಮಾಡಿಕೊಂಡಿರುವುದು ಖಂಡನೀಯ. ಕೋಲೆ ಬಸವ ಸಮುದಾಯದವರು ಊರರು ಸುತ್ತಿ ತಮ್ಮ ಜೀವನ ನಡೆಸುತ್ತಾರೆ. ಹಾಗಾಗಿ ಅವರ ಹಕ್ಕು ಪಡೆಯಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಸರ್ಕಾರ ಕೋಲೆ ಬಸವ ಜನಾಂಗಕ್ಕೆ ರಾಯಸಂದ್ರ ಸರ್ವೆ ನಂ. 91ರಲ್ಲಿ 1.2 ಎಕರೆ ಜಮೀನು ನೀಡಿದೆ. ಕೋಲೆ ಬಸವ ಸಮುದಾಯಕ್ಕೆ ಅನ್ಯಾಯ ಆಗದಂತೆ ಕ್ರಮ ವಹಿಸಬೇಕು. ಜಮೀನು ಉಳಿಸುವ ಸಲುವಾಗಿ ಮಹಿಳೆಯರು ಸಹ ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ 100 ಮಂದಿಗೆ ಹಕ್ಕುಪತ್ರ ನೀಡಿದ್ದಾರೆ. ಆದರೆ ಕೋಲೆ ಬಸವ ಸಮುದಾಯವರು ಯಾರಿಗೂ ಹಕ್ಕುಪತ್ರ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ಇವರಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.

ADVERTISEMENT

ಗ್ರಾಮಸ್ಥರು, ಕೋಲೆ ಬಸವ ಜನಾಂಗದವರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಗ್ರಾಮಗಳಲ್ಲಿ ಎಲ್ಲರೂ ಅನ್ಯೋನ್ಯವಾಗಿ ಜೀವನ ನಡೆಸಬೇಕು. ಹಾಗಾಗಿ ಅಧಿಕಾರಿಗಳು ಇಬ್ಬರಿಗೂ ಅನ್ಯೋನ್ಯವಾಗಿ ಜೀವನ ನಡೆಸುವಂತೆ ಶಾಂತಿ ಸಭೆ ನಡೆಸಿ ಸಂಧಾನ ನಡೆಸಬೇಕು ಎಂದರು.

ಒತ್ತುವರಿ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪು ಅಂತಿಮವಾಗಿದೆ. ಹಾಗಾಗಿ ನ್ಯಾಯಾಲಯದ ತೀರ್ಪಿಗೆ ಪ್ರತಿಯೊಬ್ಬರು ಗೌರವ ನೀಡಬೇಕು. ಕೋಲೆ ಬಸವ ಸಮುದಾಯಕ್ಕೆ ಹಕ್ಕುಪತ್ರ ನೀಡುವ ಕೆಲಸಕ್ಕೆ ತಾಲ್ಲೂಕು ಕಚೇರಿ ವೇಗ ನೀಡಬೇಕು. ಜಮೀನು ಮಂಜೂರಾತಿ 2013ರಲ್ಲಿ ಆಗಿದ್ದು, ಹಕ್ಕುಪತ್ರ ನೀಡಿಲ್ಲ. ಕೋಲೆ ಬಸವ ಸಮುದಾಯ ಸೇರಿದಂತೆ ಗ್ರಾಮದಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌, ಎಡಿಎಲ್‌ಆರ್‌ ಮದನ್‌, ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌, ಉಪಾಧ್ಯಕ್ಷೆ ನಾಗರತ್ನಮ್ಮ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವ ಅಧ್ಯಕ್ಷ ದ್ವಾರಕನಾಥ್‌, ಹನುಮಂತಪ್ಪ, ಶ್ರೀನಿವಾಸ್‌, ವಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.