ADVERTISEMENT

ದೇವನಹಳ್ಳಿ: ‘ಕುರುಬ ಸಮುದಾಯದಲ್ಲಿ ಶಕ್ತಿ ತುಂಬುವ ಕೆಲಸ ಮಾಡುವೆ’

ಅಭಿನಂದನೆ ಸ್ವೀಕರಿಸಿದ ಜಿ.ಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 16:53 IST
Last Updated 28 ಜೂನ್ 2020, 16:53 IST
ಕುರುಬರ ಸಂಘದ ರಾಜ್ಯಾದ್ಯಕ್ಷ ಕೃಷ್ಣ ಅವರನ್ನು ಸ್ಥಳಿಯ ಮುಖಂಡರು ಅಭಿನಂದಿಸಿದರು.
ಕುರುಬರ ಸಂಘದ ರಾಜ್ಯಾದ್ಯಕ್ಷ ಕೃಷ್ಣ ಅವರನ್ನು ಸ್ಥಳಿಯ ಮುಖಂಡರು ಅಭಿನಂದಿಸಿದರು.   

ದೇವನಹಳ್ಳಿ: ಕುರುಬ ಸಮುದಾಯದಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಕುರುಬರ ಸಂಘದ ನೂತನ ರಾಜ್ಯಾಧ್ಯಕ್ಷ ಜಿ.ಕೃಷ್ಣ ಹೇಳಿದರು.

ಇಲ್ಲಿನ ಬೀರಸಂದ್ರ ಬೀರಪ್ಪನವರ ನಿವಾಸದಲ್ಲಿ ಸ್ಥಳೀಯ ಕುರುಬ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ರಾಜ್ಯದಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿರುವ ಕುರುಬರ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಪ್ರಸ್ತುತ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿ‌ಎಸ್‌ನಿಂದ ಒಟ್ಟು 11 ಶಾಸಕರಿದ್ದಾರೆ. ಇದು ಇತರ ಸಮುದಾಯಗಳಿಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ರಾಜ್ಯದ 30 ಜಿಲ್ಲೆಯಲ್ಲಿಯೂ ಕುರುಬ ಸಮುದಾಯ ಅತ್ಯಂತ ಹಿಂದುಳಿದಿದೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ 12 ಕೋಟಿ ಕುರುಬ ಸಮುದಾಯದ ಜನಸಂಖ್ಯೆ ಇದೆ. ಕುರುಬರು ಯಾವುದೇ ಸಮುದಾಯದ ವಿರೋಧಿಗಳಲ್ಲ. ಹಾಲು ಮತಸ್ಥರು, ಜೇನುಕುರುಬ, ಕಾಡು ಕುರುಬ ಎಲ್ಲವೂ ಒಂದೇ ಸಮುದಾಯ. ಉತ್ತರ ಕರ್ನಾಟಕದ ಕುರುಬರ ಸ್ಥೀತಿ ಶೋಚನೀಯವಾಗಿದೆ. ದುಡಿಮೆಗೆ ಭೂಮಿ ಇಲ್ಲ. ಅನಕ್ಷರತೆ, ಮೂಢನಂಬಿಕೆ ಇನ್ನೂ ಜೀವಂತವಿದೆ. ರಾಜಕೀಯ ಶಕ್ತಿ ಸಂಘಟನೆಯಿಂದ ಪಡೆಯಬೇಕು’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂವಿಧಾನದ ರಕ್ಷಣೆ ಇದೆ. ಮೇಲ್ವರ್ಗದವರಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ಇದೆ. ಕುರುಬ ಸಮುದಾಯಕ್ಕೆ ಇದ್ಯಾವುದೂ ಇಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.

ಜೆಡಿ‌ಎಸ್ ಹಿಂದುಳಿದ ವರ್ಗ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಂ.ಬೀರಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ 2.5 ಲಕ್ಷ ಕುರುಬ ಸಮುದಾಯವಿದೆ. ಚುನಾವಣೆ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಹೇಳಿದರು.

ಕುರುಬರ ಸಂಘ ರಾಜ್ಯ ಘಟಕ ನಿರ್ದೇಶಕರಾದ ರಾಮಾಂಜಿನಿ, ಬಸವರಾಜಗೌಡ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್. ಎಂ. ರವಿಕುಮಾರ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಮ್ಮ, ವಿವಿಧ ಘಟಕ ಮುಖಂಡರಾದ ವಿಜಯಕುಮಾರ್, ವೆಂಕಟೇಗೌಡ, ಕೃಷ್ಣಮೂರ್ತಿ, ಮಂಜುನಾಥ್, ಕೆಂಪರಾಜು, ಬಾಬು ಉಪಸ್ಥಿತರಿದ್ದರು.

ವಸತಿ ನಿಲಯ ಅಗತ್ಯ
‘ರಾಜ್ಯದಲ್ಲಿ 60 ರಿಂದ 70 ಲಕ್ಷ ಕುರುಬ ಸಮುದಾಯವಿದೆ ಎಂದು ಅಂದಾಜಿಸಲಾಗಿದೆ. ಮೈಸೂರು ಭಾಗ, ಮಧ್ಯ ಮತ್ತು ಉತ್ತರ ಕರ್ನಾಟಕ ಸೇರಿ ಒಟ್ಟು 45ಕ್ಕಿಂತ ಹೆಚ್ಚು ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಹಿಂದುಳಿದ ವರ್ಗದಲ್ಲಿ ರಾಜಕೀಯ ಮತ್ತು ಇತರ ಸವಲತ್ತು ಪಡೆಯಲು ತೀವ್ರ ಪೈಪೋಟಿ ಇದೆ. ಈ ಪೈಪೋಟಿಗೆ ಸೆಡ್ಡು ಹೊಡೆಯಬೇಕಾದರೆ ಸಮುದಾಯದಲ್ಲಿ ಶಿಕ್ಷಣದ ಮಹತ್ವದ ಅರಿವು ಮೂಡಿಸಿ ವಸತಿ ನಿಲಯಗಳನ್ನು ಆರಂಭಿಸಬೇಕಾಗಿದೆ’ ಎಂದು ಹೇಳಿದರು.

**

ಉತ್ತರ ಕರ್ನಾಟಕದ ಕುರುಬರ ಸ್ಥೀತಿ ಶೋಚನೀಯವಾಗಿದೆ. ದುಡಿಮೆಗೆ ಭೂಮಿ ಇಲ್ಲ. ಅನಕ್ಷರತೆ, ಮೂಢನಂಬಿಕೆ ಇನ್ನೂ ಜೀವಂತವಿದೆ. ರಾಜಕೀಯ ಶಕ್ತಿ ಸಂಘಟನೆಯಿಂದ ಪಡೆಯಬೇಕು.
-ಜಿ.ಕೃಷ್ಣ, ಕುರುಬರ ಸಂಘದ ರಾಜ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.