ADVERTISEMENT

ದೇವನಹಳ್ಳಿ | 'ಕನ್ನಡದ ಕಂಪು ಜಗತ್ತಿಗೆ ಪಸರಿಸಿದ ಕವಿ'

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 2:19 IST
Last Updated 30 ಡಿಸೆಂಬರ್ 2025, 2:19 IST
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ನಡೆಯಿತು
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ನಡೆಯಿತು   

ದೇವನಹಳ್ಳಿ: ಕನ್ನಡ ಸಾಹಿತ್ಯವನ್ನು ಜಗತ್ತಿನ ಮಟ್ಟಕ್ಕೆ ಪರಿಚಯಿಸಿದ ಮಹಾನ್ ಕವಿ, ಚಿಂತಕ ಹಾಗೂ ಸಮಾಜ ಸುಧಾರಕ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಇಂದು ಕೂಡ ನಮ್ಮ ಬದುಕಿಗೆ ದಾರಿ ತೋರಿಸುವ ಬೆಳಕಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದರು.

ಕುವೆಂಪು ಅವರು ಕೇವಲ ಕವಿ ಮಾತ್ರವಲ್ಲ, ಅವರು ಒಬ್ಬ ದಾರ್ಶನಿಕ ಹಾಗೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಅವರ ವಿಶ್ವಮಾನವ ಸಂದೇಶ, ಮಾನವರೆಲ್ಲ ಒಂದೇ, ಎಲ್ಲರೂ ಸಮಾನರು ಎಂಬ ಸಾರುತ್ತದೆ. ಜಾತಿ, ಧರ್ಮ, ಭಾಷೆ ಎಂಬ ಭೇದಗಳನ್ನು ಮೀರಿ ಮಾನವೀಯತೆ ಮೊದಲಿಗೆ ಇಡುವ ಚಿಂತನೆ ಕುವೆಂಪು ಅವರ ಸಾಹಿತ್ಯದ ಮೂಲವಾಗಿದೆ ಎಂದರು.

ADVERTISEMENT

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕುವೆಂಪು ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕವನಗಳು, ಕಾದಂಬರಿಗಳು ಮತ್ತು ಪ್ರಬಂಧಗಳು ಜನರಲ್ಲಿ ಮಾನವೀಯ ಮೌಲ್ಯ, ಸ್ವಾಭಿಮಾನ, ಆತ್ಮವಿಶ್ವಾಸ ಬೆಳೆಸಿವೆ. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆ ಮತ್ತು ಸಂಸ್ಕೃತಿಗಳನ್ನು ಗೌರವಿಸುವ ಮನೋಭಾವವನ್ನು ಅವರು ಕಲಿಸಿದ್ದಾರೆ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಎಲ್ಲರೂ ಬೆಳೆಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನತೆ ಅವರ ಬರಹಗಳಿಂದ ಜೀವನ ಮೌಲ್ಯಗಳನ್ನು ಕಲಿಯಬೇಕು. ಸತ್ಯ, ನ್ಯಾಯ, ಸಮಾನತೆ ಮತ್ತು ಸಹಬಾಳ್ವೆ ಎಂಬ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಜೀವ್ ಸುಲೋಚನ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.