ADVERTISEMENT

‘ಕುವೆಂಪು ವಿಶ್ವ ಮಾನವತೆಯ ಹರಿಕಾರ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 14:09 IST
Last Updated 7 ನವೆಂಬರ್ 2019, 14:09 IST
ಚನ್ನಪಟ್ಟಣದಲ್ಲಿ ನಡೆದ ಜಲಗಾರ ನಾಟಕ ಪ್ರದರ್ಶನವನ್ನು ನೃತ್ಯಗುರು ಎಂ.ಸಿ.ಸುಜೇಂದ್ರಬಾಬು ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ನಡೆದ ಜಲಗಾರ ನಾಟಕ ಪ್ರದರ್ಶನವನ್ನು ನೃತ್ಯಗುರು ಎಂ.ಸಿ.ಸುಜೇಂದ್ರಬಾಬು ಉದ್ಘಾಟಿಸಿದರು   

ಚನ್ನಪಟ್ಟಣ: ‘ಕುವೆಂಪು ಎಲ್ಲ ಜಾತಿ, ಧರ್ಮಗಳನ್ನು ಮೀರಿದ ವಿಶ್ವ ಮಾನವತೆಯ ಹರಿಕಾರ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.

ಇಲ್ಲಿನ ಶತಮಾನೋತ್ಸವ ಭವನದಲ್ಲಿ ಸ್ಪೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ಫೂರ್ತಿ ಸಂಭ್ರಮ ಹಾಗೂ ಜಲಗಾರ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರಕವಿ ಕುವೆಂಪು ವಿಶ್ವಮಾನವತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಹಾಗೂ ಅದನ್ನು ಜಾರಿಗೊಳಿಸಿದ ಮಹಾನ್ ಚೇತನ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಯುವಕರಲ್ಲಿ ಮೇಳೈಸದ ಹೊರತು ಉತ್ತಮ ಸಮಾಜ ನಿರ್ಮಾಣ ಮಾಡಲು ಅಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು’ ಎಂದರು.

ADVERTISEMENT

ಸಹ ಪ್ರಾಧ್ಯಾಪಕ ಡಾ. ಮಧುಸೂದನ ಜೋಶಿ ಮಾತನಾಡಿ, ‘ಕುವೆಂಪು ಸದಾ ಶೋಷಿತರ ಪರ ಧನಿ ಎತ್ತಿದ ಮಹಾನ್ ಕವಿ. ಅವರ ಎಲ್ಲ ನಾಟಕಗಳು ಕೂಡ ಶೋಷಿತರ ಧನಿಯಾಗಿವೆ. ಹಲವು ಪ್ರಥಮಗಳ ಮಹಾಪುರುಷರಾದ ಕುವೆಂಪು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು. ಕುವೆಂಪು ವಿರಚಿತ ಜಲಗಾರ ನಾಟಕವನ್ನು ಪ್ರದರ್ಶಿಸುತ್ತಿರುವುದು ಅರ್ಥಗರ್ಭಿತವಾಗಿದೆ’ ಎಂದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ‘ಜನಪದ ಕಲೆಗಳು ನಶಿಸುತ್ತಿರುವ ಇಂತಹ ಸಂದರ್ಭದಲ್ಲಿ ಅವುಗಳ ಪುನರುತ್ಥಾನದ ಹಾದಿಯಲ್ಲಿ ಸಂಘ–ಸಂಸ್ಥೆಗಳು ನಡೆಸುತ್ತಿರುವ ಕಾರ್ಯಕ್ರಮಗಳು ಹೆಮ್ಮೆಯ ವಿಚಾರ. ದೃಶ್ಯ ಮಾಧ್ಯಮಗಳ ಮೊರೆ ಹೋಗಿ ಇಂದು ನಾವು ಹಳೆಯದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ’ ಎಂದರು.

ನೃತ್ಯಗುರು ಎಂ.ಸಿ.ಸುಜೇಂದ್ರಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಹೋರಾಟಗಾರ ಪಿ.ಜೆ.ಗೋವಿಂದರಾಜು, ಡಾ.ರಾಜ್ ಕಲಾಬಳಗದ ಅಧ್ಯಕ್ಷ ಮಂಜುನಾಥ್ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ನಡೆಸಿದವು. ಗಾಯಕರಾದ ಎಚ್.ಎಸ್.ಸರ್ವೋತ್ತಮ್, ಬ್ಯಾಡರಹಳ್ಳಿ ಶಿವಕುಮಾರ್ ತಂಡ ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.