ADVERTISEMENT

ಹೈನುಗಾರಿಕೆಯಿಂದ ರೈತರ ಬದುಕು ಸುಧಾರಣೆ

ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:36 IST
Last Updated 6 ಜನವರಿ 2019, 13:36 IST
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಲಾಯಿತು
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಲಾಯಿತು   

ದೇವನಹಳ್ಳಿ: ಬರಗಾಲದ ನಡುವೆ ರೈತರ ಜೀವನ ಸುಧಾರಣೆಗೆ ಹೈನುಗಾರಿಕೆ ಪ್ರಮುಖವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ದೇವನಹಳ್ಳಿ ಶಿಬಿರ ಕಚೇರಿ ಮತ್ತು ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ತಾಲ್ಲೂಕು ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರ ಬದುಕು ಉಳಿದಿರುವುದು ಪಶು ಸಾಕಾಣಿಕೆಯಿಂದ. ಕೃಷಿಯಿಂದ ನಷ್ಟ ಅನುಭವಿಸಿದರೂ ಜೀವನ ನಿರ್ವಹಣೆ ಹಾಲು ಉತ್ಪಾದನೆಯಿಂದ ಸಾಗುತ್ತಿದೆ. ಒಕ್ಕೂಟ ಪ್ರೋತ್ಸಾಹ ನೀಡುವ ಉದ್ದೇಶ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದೆಂದು ಉನ್ನತ ಮಟ್ಟದ ಪದವಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆಯಬೇಕು. ಸಮಾಜದಲ್ಲಿ ಕೊಡುಗೆ ನೀಡುವ ಪ್ರತಿಭಾನ್ವಿತರಾಗಬೇಕು ಕಿವಿಮಾತು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಡಿ ಜೀವನ ನಿರ್ವಹಿಸಲು ಆರ್ಥಿಕ ಮೂಲದ ಅವಶ್ಯ ಇದೆ. ಇದನ್ನು ಒಕ್ಕೂಟ ಪ್ರೋತ್ಸಾಹ ನೀಡುತ್ತಿದೆ. ಕಠಿಣ ಪರಿಶ್ರಮದಿಂದ ತಮ್ಮ ಗುರಿ ಮುಟ್ಟಲು ಉತ್ತಮ ಅವಕಾಶವಿದೆ. ಉತ್ತಮ ಅಂಕ ಗಳಿಕೆ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ದೇವನಹಳ್ಳಿ ತಾಲ್ಲೂಕಿನಲ್ಲಿ ಭೂಮಿ ವಿಸ್ತೀರ್ಣ ಕಡಿಮೆಯಾಗುತ್ತಿದೆ. ನೂತನ ಬಡವಾಣೆ ನಿರ್ಮಾಣದಿಂದ ಕೃಷಿ ಭೂಮಿ ಅಪೋಶನವಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರೈತರ ಜೀವನಕ್ಕೆ ಹಾಲು ಉತ್ಪಾದನೆ ಪರ್ಯಾಯ. ಪ್ರತಿಯೊಬ್ಬ ವಿದ್ಯಾರ್ಥಿ ಎರಡೆರಡು ಸಸಿ ಬೆಳೆಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

ಬಮೂಲ್ ಒಕ್ಕೂಟ ಉಪಾಧ್ಯಕ್ಷ ಬಿ.ಶ್ರೀನಿವಾಸ್ ಮಾತನಾಡಿ, ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ 182ಸಂಘಗಳಿದ್ದು ಪ್ರತಿದಿನ ಸರಾಸರಿ 1,32,201 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಸರಾಸರಿ ವ್ಯಾಪಾರ ಲಾಭ ಶೇ10ರಷ್ಟು ಹೆಚ್ಚಳವಾಗಿದೆ. ಪ್ರತಿ ದಿನ ಉತ್ಪಾದಕರಿಗೆ ಪಾವತಿಸುತ್ತಿರುವ ಮೊತ್ತ ₹33,15,601, ಮಾಸಿಕ, 10,27,83,633 ಮೊತ್ತ ಪಾವತಿಯಾಗುತ್ತಿದೆ ಎಂದರೆ ಹಾಲು ವಹಿವಾಟು ಯಾವ ರೀತಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಹಾಪ್‌ಕಾಮ್ ಉಪಾಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎ.ಸಿ.ನಾಗರಾಜ್, ನಿರ್ದೇಶಕ ಸಂಪಂಗಿಗೌಡ, ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ತಾಲ್ಲೂಕು ವ್ಯವಸಾಯೋತ್ಪನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶ್ರೀರಾಮಯ್ಯ, ನಿರ್ದೇಶಕ ಮಂಡಿಬೆಲೆ ರಾಜಣ್ಣ, ಎ.ಪಿ.ಎಂ.ಸಿ ಉಪಾಧ್ಯಕ್ಷ ಸುಧಾಕರ್, ಹಾಲು ಒಕ್ಕೂಟ ಶಿಬಿರ ಕಚೇರಿ ಉಪವ್ಯವಸ್ಥಾಪಕರಾದ ಡಾ.ಗಂಗಯ್ಯ, ಡಾ.ಎನ್.ಕೃಷ್ಣಮೂರ್ತಿ, ಡಾ.ನಾಗರಾಜ್, ಸಹಾಯಕ ವ್ಯವಸ್ಥಾಪಕರಾದ ಬಿ.ವೆಂಕಟೇಶ್,ಮುನಿರಾಜು ಗೌಡ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಭೈರದೇನಹಳ್ಳಿ ಲೋಕೇಶ್, ತಾಲ್ಲೂಕು ಘಟಕ ಅಧ್ಯಕ್ಷ ಚನ್ನಕೇಶವ, ನಿರ್ದೇಶಕ ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.