ವಿಜಯಪುರ(ದೇವನಹಳ್ಳಿ): ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನುವಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೆ ಕಟ್ಟಡದಲ್ಲಿದ್ದು, ಮೂಲ ಸೌಕರ್ಯ ಕೊರತೆಯಿಂದ ಕಲಿಕಾ ವಾತಾವರಣವೇ ಮಾಯವಾಗಿದೆ.
ಶಾಲೆಯಲ್ಲಿ ಒಂದು ಕೊಠಡಿ ಮಾತ್ರವೇ ಇದ್ದು, ಒಂದೇ ಕೊಠಡಿಯಲ್ಲಿ ಶಾಲೆಗೆ ಸಂಬಂಧಿಸಿದ ಬೀರುಗಳು, ಬೆಂಚುಗಳು, ಕಲಿಕೋಪಕರಣಗಳನ್ನು ಇಡಲಾಗಿದೆ. ಇಲ್ಲಿ 5 ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದಾರೆ. ಮೂರು ಬಾಲಕರು, ಇಬ್ಬರು ಬಾಲಕಿಯರು ಇದ್ದಾರೆ. ಇಲ್ಲಿನ ವಾತಾವರಣದಿಂದಾಗಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಸಲು ಯಾರೂ ಆಸಕ್ತಿ ತೋರಿಸುತ್ತಿಲ್ಲ. ಒಬ್ಬ ಶಿಕ್ಷಕ ಇದ್ದಾರೆ.
ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಶೌಚಾಲಯವಿಲ್ಲ. ಶಾಲೆಯ ಹಿಂದೆ ಇರುವ ಶೌಚಾಲಯ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ಬಾಲಕರು ಮೂತ್ರವಿಸರ್ಜನೆಗೆ ಉಪಯೋಗಿಸುತ್ತಿರುವ ಮೂತ್ರಾಲಯದಲ್ಲಿ ದುರ್ವಾಸನೆ ಬೀರುತ್ತಿದೆ. ಶಾಲಾ ಕೊಠಡಿಯ ಮೇಲ್ಛಾವಣಿ ಸೋರುತ್ತಿದೆ. ಮಳೆಗಾಲದಲ್ಲಿ ಇಲ್ಲಿಗೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತದೆ ಎನ್ನುತ್ತಾರೆ ಪೋಷಕರು.
1974ರಲ್ಲಿ ಕಟ್ಟಿರುವ ಈ ಶಾಲೆಯ ಮೇಲ್ಛಾವಣಿ ಚಪ್ಪಡಿ ಕಲ್ಲಿನಿಂದ ಕೂಡಿವೆ. ಶಾಲೆಯ ಮುಂಭಾಗದಲ್ಲಿನ ಗೇಟ್‌ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದಿರುವ ಕಾರಣ, ಗೇಟು ಇಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಗಮನಹರಿಸಿ, ಶಾಲಾ ಕಟ್ಟಡ ದುರಸ್ತಿಗೊಳಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಶಾಲೆ ದುರಸ್ಥಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶಾಲೆಯ ವಾತಾವರಣ ಉತ್ತಮಪಡಿಸಲು ಪ್ರಯತ್ನಿಸಲಾಗುತ್ತಿದೆಮುನೇಗೌಡ ಶಾಲೆಯ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.