ADVERTISEMENT

ಸಿಬ್ಬಂದಿ ಕೊರತೆ, ರೈತರ ಪರದಾಟ 

ದೇವನಹಳ್ಳಿ ತಾಲ್ಲೂಕು ಕುಂದಾಣ ರೈತ ಸಂಪರ್ಕ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:19 IST
Last Updated 16 ಜೂನ್ 2019, 13:19 IST
ರೈತ ಸಂಪರ್ಕ ಕೇಂದ್ರ ಕಚೇರಿ 
ರೈತ ಸಂಪರ್ಕ ಕೇಂದ್ರ ಕಚೇರಿ    

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೈತರಿಗೆ ಸಿಗಬೇಕಾದ ಸವಲತ್ತುಗಳು ಸಕಾಲದಲ್ಲಿ ಸಿಗುತ್ತಿಲ್ಲ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.

‘ಹೋಬಳಿ ಕೇಂದ್ರ ಸ್ಥಾನವಾಗಿರುವ ಕುಂದಾಣದಲ್ಲಿ ಹತ್ತಾರು ವರ್ಷಗಳ ಹೋರಾಟದ ಫಲವಾಗಿ ₹ 22 ಲಕ್ಷ ವೆಚ್ಚದ ನೂತನ ರೈತ ಸಂಪರ್ಕ ಕಚೇರಿ ಕಳೆದ ಒಂದು ವರ್ಷ ಹಿಂದೆ ಉದ್ಘಾಟನೆಗೊಂಡಿದೆ. ನಂತರ ಐದಾರು ತಿಂಗಳುಗಳಿಂದ ರೈತ ಸಂಪರ್ಕ ಕೇಂದ್ರದಲ್ಲಿ ವಾರಕ್ಕೆ ಒಂದೆರಡು ಬಾರಿ ಅಧಿಕಾರಿ ಬಂದು ಹೋಗುತ್ತಿದ್ದಾರೆ. ಇದನ್ನು ಬಿಟ್ಟರೆ ಯಾವ ಸಂದರ್ಭದಲ್ಲಿ ಬರುತ್ತಾರೆ ಹೋಗುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆ ಮೇರೆಗೆ ನೇಮಕ ಮಾಡಿರುವ ಒಬ್ಬರು ಸಿಬ್ಬಂದಿ ಮಾತ್ರ ಪ್ರತಿ ದಿನ ಕಚೇರಿ ಬಾಗಿಲು ತೆರೆದು ಕುಳಿತಿರುತ್ತಾರೆ. ರೈತ ಸಂಪರ್ಕ ಕೇಂದ್ರವಿದ್ದರೂ ರೈತರಿಗೆ ಪ್ರಯೋಜನವಿಲ್ಲ. ಜಿಲ್ಲಾಡಳಿತ ಭವನದಿಂದ ಕೇವಲ ಒಂದುವರೆ ಕಿ.ಮೀ ಅಂತರವಿರುವ ರೈತ ಸಂಪರ್ಕ ಕೇಂದ್ರದ ಸ್ಥಿತಿ ಈ ರೀತಿಯಾದರೆ ಹೇಗೆ’ ಎನ್ನುತ್ತಾರೆ ಅವರು.

ADVERTISEMENT

‘ಮುಂಗಾರು ಸಕಾಲದಲ್ಲಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಕೆಲ ರೈತರು ಉಳುಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತೆ ಕೆಲವರು ಬಿತ್ತನೆಗಾಗಿ ಪರದಾಡುತ್ತಿದ್ದಾರೆ, ಮುಂಗಾರು ಹಂಗಾಮಿನಲ್ಲಿ ತೊಗರಿ, ಮುಸುಕಿನ ಜೋಳ ಮತ್ತು ರಾಗಿ ಅವರೆ ಪ್ರಮುಖ ಬೆಳೆಗಳಾಗಿವೆ ಯಾವ ತಳಿ ಬೀಜ ಎಂಬುದರ ಬಗ್ಗೆ ಅನಕ್ಷರಸ್ಥ ರೈತರಿಗೆ ಅರಿವಿಲ್ಲ’ ಎಂದು ತಾಲ್ಲೂಕು ಕೃಷಿಕ ಸಮಾಜ ನಿರ್ದೇಶಕ ಎಚ್. ಎಂ. ರವಿಕುಮಾರ್ ಆರೋಪಿಸಿದರು.

‘ಕುಂದಾಣ ಹೋಬಳಿ ವ್ಯಾಪ್ತಿಗೆ ಬರುವ ಕಾರಹಳ್ಳಿ ಕ್ರಾಸ್, ಕಾರಹಳ್ಳಿ, ಮಜ್ಜಿಗೆಹೊಸಹಳ್ಳಿಯಿಂದ ಕುಂದಾಣ ರೈತ ಸಂಪರ್ಕ ಕೇಂದ್ರಕ್ಕೆ 8 ರಿಂದ 10 ಕಿ.ಮೀ ದೂರವಿದೆ. ದೇವನಹಳ್ಳಿಗೆ ಬಂದು ಚಪ್ಪರದ ಕಲ್ಲು ಕ್ರಾಸ್‌ಗೆ ಬಸ್‌ನಲ್ಲಿ ತೆರಳಿ ಒಂದುವರೆ ಕಿ.ಮೀ ನಡೆದು ರೈತ ಸಂಪರ್ಕ ಕೇಂದ್ರ ಬಂದರೆ ರೈತರ ನೆರವಿಗೆ ಅಧಿಕಾರಿಗಳೇ ಇಲ್ಲದಿದ್ದರೆ ರೈತರು ಪಾಡೇನು ? ತಾಲ್ಲೂಕಿನಲ್ಲಿ ಏನಾಗುತ್ತಿದೆ ಎಂಬುದೆ ಅರ್ಥವಾಗುತ್ತಿಲ್ಲ’ ಎಂದು ಅವರು ದೂರಿದರು.

ಕೃಷಿ ಇಲಾಖೆ ಮುಂಗಾರು ಆರಂಭದಲ್ಲಿ ಕೃಷಿ ಅಭಿಯಾನದ ಮೂಲಕ ‘ನಮ್ಮ ನಡಿಗೆ ರೈತರ ಬಳಿಗೆ’ ಎಂದು ಕಾರ್ಯಕ್ರಮ ನಡೆಸುತ್ತದೆ. ಅದೊಂದು ಕಾಟಾಚಾರದ ಅರ್ಧ ದಿನದ ಕಾರ್ಯಕ್ರಮ, ರೈತರಿಗೆ ಮಾಹಿತಿಯೇ ಇರುವುದಿಲ್ಲ. ಕೃಷಿ ಯಾಂತ್ರೀಕರಣ ಮತ್ತು ಪರಿಕರ ಅನೇಕ ಸವಲತ್ತುಗಳನ್ನು ಸ್ಥಳೀಯ ಜನಪ್ರತಿನಿಧಿಗಳ ಶಿಫಾರಸಿನ ಮೇರೆಗೆ ನೀಡುತ್ತಾರೆ, ಅರ್ಹ ಫಲಾನುಭವಿಗಳು ತಲುಪುತ್ತಿಲ್ಲ ಎಂದು ಕೆ.ಹೊಸೂರು ಗ್ರಾಮದ ರೈತ ಮುನಿನಂಜಪ್ಪ ದೂರಿದರು.

ಕೃಷಿ ಇಲಾಖೆ ಅಧಿಕಾರಿಗಳ ಕೆಲಸ ಮುಂಗಾರು ಆರಂಭದಿಂದ ಮೂರು ತಿಂಗಳ ಹಿಂಗಾರಿನಲ್ಲಿ ಒಂದು ತಿಂಗಳು ಮಾತ್ರ, ರೈತರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕಾದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೆ ಇರುವುದಿಲ್ಲ ಅಂದ ಮೇಲೆ ಉಳುಮೆ ಮಾಡುವ ರೈತರ ಜಮೀನುಗಳಿಗೆ ಹೋಗಿ ರೈತರಿಗೆ ಮಾಹಿತಿ ನೀಡುವುದೇ ಇಲ್ಲ, ಸರ್ಕಾರದ ಯೋಜನೆಗಳು ಎಲ್ಲಿ ಬರುತ್ತೆ ಎಲ್ಲಿ ಹೋಗುತ್ತೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕುಂದಾಣ ಗ್ರಾಮ ಪಂಚಾಯಿತಿ ಸದಸ್ಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.