ADVERTISEMENT

ಭೂ ಸ್ವಾಧೀನ ಹೋರಾಟ: ವಿಷ ಬೆರೆಸಿದ ಅನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 9:08 IST
Last Updated 10 ಏಪ್ರಿಲ್ 2025, 9:08 IST
<div class="paragraphs"><p>&nbsp;ಆತ್ಮಹತ್ಯೆಗೆ ಯತ್ನ</p></div>

 ಆತ್ಮಹತ್ಯೆಗೆ ಯತ್ನ

   

ದೇವನಹಳ್ಳಿ (ಬೆಂ. ಗ್ರಾಮಾಂತರ): ಸಾವಿರ ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಗುರುವಾರ ವಿಕೋಪಕ್ಕೆ ತಿರುಗಿದೆ.

ಪ್ರತಿಭಟನಾ ಸ್ಥಳದಲ್ಲಿ ತಯಾರಿಸಿದ ಅನ್ನಕ್ಕೆ (ಬಾತ್) ವಿಷ ಬೆರೆಸಿ ಸೇವಿಸಿದ ರೈತರೊಬ್ಬರು ಅಸ್ವಸ್ಥಗೊಂಡಿದ್ದಾರೆ.

ADVERTISEMENT

ಅಸ್ವಸ್ಥಗೊಂಡ ರೈತ ವೆಂಕಟೇಶ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಾರದೊಳಗೆ ಅಂತಿಮ ನಿರ್ಧಾರ ಪ್ರಕಟಿಸುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೋರಾಟ ಕೈ ಬಿಡುವಂತೆ ರೈತರಿಗೆ ಮನವಿ ಮಾಡಿದ್ದರು.

ಆದರೆ, ಕೆಐಎಡಿಬಿ ಈಚೆಗೆ ಹೊರಡಿಸಿದ್ದ ಭೂ ಸ್ವಾಧೀನ ಶಿಫಾರಸು ಪತ್ರ ಎಲ್ಲೆಡೆ ಸಂಚಲನ ಮೂಡಿಸಿತ್ತು. ಇದರಿಂದ ಸಿಡಿಮಿಡಿಗೊಂಡ ರೈತರು ಮತ್ತು ಹೋರಾಟಗಾರರು ಏಪ್ರಿಲ್ 10 ರಂದು ಸಚಿವ ಮುನಿಯಪ್ಪ ಅವರ ಮನೆಗೆ ತೆರಳಿ ಚರ್ಚಿಸಲು ನಿರ್ಧಾರ ಮಾಡಿದ್ದರು.
ಅದರಂತೆ ಗುರುವಾರ ಬೆಳಗ್ಗೆ ಚನ್ನರಾಯಪಟ್ಟಣ ಹೋಬಳಿ ರೈತರು ಮತ್ತು ಹೋರಾಟಗಾರರು ಸಚಿವರ ಭೇಟಿಗಾಗಿ ಬೆಂಗಳೂರಿನತ್ತ ಹೊರಟಿದ್ದರು.

ಈ ವೇಳೆ ಪೊಲೀಸರು ತಾಲ್ಲೂಕಿನ ವಿವಿಧೆಡೆ ರೈತ ಹೋರಾಟಗಾರರನ್ನು ತಡೆದರು. ಇದರಿಂದ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಚಕಮಕಿ ವಾಗ್ವಾದಕ್ಕೆ ತಿರುಗಿ ರೈತರು ಪ್ರತಿಭಟನೆ ಆರಂಭಿಸಿದರು.

'ಸಚಿವರ ಭೇಟಿಗೆ ಹೊರಟಿದ್ದ ರೈತರನ್ನು ತಡೆದು ಪೊಲೀಸರು ದರ್ಪ ತೋರುತ್ತಿದ್ದಾರೆ. ಕೆಲವು ರೈತ ಮುಖಂಡರನ್ನು ಗೃಹ ಬಂಧನದಲ್ಲಿ ಇಟ್ಟು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ' ಎಂದು ರೈತರು ಆರೋಪಿಸಿದರು.

ಧರಣಿ ಸ್ಥಳದಲ್ಲೇ ಅನ್ನ (ಬಾತ್) ತಯಾರಿಸಿದ ರೈತರು ಅದರಲ್ಲಿ‌‌ ವಿಷ ಬೆರೆಸಿ ಸೇವಿಸಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಅನ್ನದ ಪಾತ್ರೆ ಕಿತ್ತು ಬಿಸಾಡಿದರು. ಇದರಿಂದ ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಯಿತು. ಈ ನಡುವೆ ವೆಂಕಟೇಶ ಎಂಬ ರೈತರೊಬ್ಬರು ವಿಷ ಬೆರೆಸಿದ ಅನ್ನ ಸೇವಿಸಿದರು.

ಇದರೊಂದಿಗೆ 1080 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ ಭೂಸ್ವಾಧೀನ ವಿರೋಧಿ ಹೋರಾಟ ಉಗ್ರ ಸ್ವರೂಪ ತಾಳಿದೆ.

ಚನ್ನರಾಯಪಟ್ಟಣದ 13 ಹಳ್ಳಿಗಳಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ 1080 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.