ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಕ್ಕೋತ್ತಾಯದ ಕುರಿತು ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರವರೆಗೂ ಸಮಯ ಕೇಳಿರುವ ಹಿನ್ನಲೆಯಲ್ಲಿ ಬಾಧಿತ ಗ್ರಾಮಗಳಲ್ಲಿ ಜಾಗೃತಿ ಸಭೆ ಮಂಗಳವಾರ ನಲ್ಲೂರು, ಮಲ್ಲೇಪುರದಲ್ಲಿ ನಡೆಯಿತು.
ಹಿರಿಯ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮರ್ ಮಾತನಾಡಿ, ‘ಸಂವಿಧಾನ ಶಕ್ತಿ ಹಾಗೂ ಜನತಾ ಶಕ್ತಿ ಒಂದಾದರೆ ಮಾತ್ರ ಸ್ವಾತಂತ್ರ್ಯ ಹೋರಾಟದ ಆಶಯ ಹಾಗೂ ಗುರಿ ಈಡೇರಿಸಿಕೊಳ್ಳಲು ಸಾಧ್ಯ. ಅನ್ಯಾಯದ ವಿರುದ್ಧದ ಪ್ರತಿಭಟನೆ ಸ್ವರಾಜ್ಯ ನಿರ್ಮಾಣಕ್ಕೆ ದಾರಿ ಬಲವಂತದ ಭೂಸ್ವಾಧೀನ ವಿರೋಧಿ ಹೋರಾಟದ ಜತೆ ಕೊನೆವರೆಗೂ ಜೊತೆಯಲ್ಲಿ ಇರುವುದಾಗಿ’ ತಿಳಿಸಿದರು.
ಹಿರಿಯ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಕಳದ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಹೋರಾಟದ ಮೇಲೆ ನಂಬಿಕೆ ಕಾಪಾಡಿಕೊಂಡು ಧೃತಿಗಡದೆ ದೃಢವಾಗಿ ಪ್ರತಿಭಟಿಸುತ್ತಾ ಬಂದಿರುವುದು ಒಂದು ಅಪೂರ್ವ ಮಾದರಿ. ಈ ಕಾರಣದಿಂದಲೇ ದೇಶದಾದ್ಯಂತ ಬೆಂಬಲ ವ್ಯಕ್ತವಾಗಿದೆ ಮತ್ತು ರಾಜ್ಯದ ಎಲ್ಲ ಭೂಕಬಳಿಕೆ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, ‘ಹಸಿರು ವಲಯ ಎಂದು ರಾಜ್ಯ ಸರ್ಕಾರ ಘೋಷಿಸಲಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಭೂಸ್ವಾಧೀನಕ್ಕೆ ಒಳಪಡಿಸಿರುವ 13 ಗ್ರಾಮಗಳು ಹಾಗೂ ಈ ಹಿಂದೆ ಭೂಸ್ವಾಧೀನ ಮಾಡಿಕೊಂಡಿರುವ ಗ್ರಾಮಗಳು ಹಸಿರು ವಲಯದಲ್ಲೇ ಇವೆ’ ಎಂದು ತಿಳಿಸಿದರು.
ಈಗಾಗಲೇ ಹಸಿರು ವಲಯದಲ್ಲಿರುವ ಪ್ರದೇಶವನ್ನು ಇನ್ನೊಮ್ಮೆ ಹಸಿರು ವಲಯ ಎಂದು ಘೋಷಿಸುವುದಾಗಿ ಹೇಳುತ್ತಿರುವುದು ಹಾಸ್ಯಸ್ಪಾದ. ಪಿತ್ರಾರ್ಜಿತ ಆಸ್ತಿ ಮೇಲಿನ ರೈತರ ಹಕ್ಕನ್ನು ಯಾವುದೇ ಕ್ರಮಗಳಿಂದ ಕಿತ್ತುಕೊಳ್ಳುವುದು ಅಸಾಧ್ಯ. ಖಾಸಗಿ ಆಸ್ತಿ ಹೊಂದುವುದಕ್ಕೆ ಸಂವಿಧಾನ ರಕ್ಷಣೆ ಇದೆ. ಇಂತಹ ಪೊಳ್ಳು ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಕಾರಹಳ್ಳಿ ಶ್ರೀನಿವಾಸ್ ಮಾತಾನಾಡಿದರು. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸಿ.ಎನ್.ದೀಪಕ್, ಪ್ರಶಾಂತ್ ಹಾಗೂ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮಾರೇಗೌಡ, ಮುನಿಶ್ಯಾಮಣ್ಣ, ನಂಜಪ್ಪ, ರಘು, ಗೋಪಿನಾಥ್, ಮುಕುಂದ, ಸುಬ್ರಹ್ಮಣ್ಯ. ಅಶ್ವಥ್, ಮೋಹನ್, ಕೃಷ್ಣಪ್ಪ, ಗೋಪಾಲಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.