ADVERTISEMENT

ಹೊಸಕೋಟೆ | ಜಮೀನು ಪೋಡಿಗೆ ಲಂಚ : ಗ್ರಾಮ ಆಡಳಿತಾಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 8:04 IST
Last Updated 14 ಜನವರಿ 2026, 8:04 IST
ಹೊಸಕೋಟೆ ನಗರದ ಪ್ರೆಸ್ ಕ್ಲಬ್‌ನಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಲಂಚ ಪಡೆದ ಗ್ರಾಮ ಆಡಳಿತ ಅಧಿಕಾರಿ ಮನೋಹರ್ ಅವರ ಅಮಾನತಿನ ಆದೇಶ ಪ್ರತಿಗಳನ್ನು ಪ್ರದರ್ಶಿಸಿದರು
ಹೊಸಕೋಟೆ ನಗರದ ಪ್ರೆಸ್ ಕ್ಲಬ್‌ನಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಲಂಚ ಪಡೆದ ಗ್ರಾಮ ಆಡಳಿತ ಅಧಿಕಾರಿ ಮನೋಹರ್ ಅವರ ಅಮಾನತಿನ ಆದೇಶ ಪ್ರತಿಗಳನ್ನು ಪ್ರದರ್ಶಿಸಿದರು   

ಹೊಸಕೋಟೆ: ಜಮೀನು ಪೋಡಿ ಅನಗತ್ಯ ವಿಳಂಬ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಜಡೆಗೇನಹಳ್ಳಿ ಹೋಬಳಿ ನಾಡಕಚೇರಿ ಹೋಬಳಿ ಗ್ರಾಮ ಆಡಳಿತಾಧಿಕಾರಿ ಕೆ.ಮನೋಹರ್ ಅವರನ್ನು ಅಮಾನತು ಮಾಡಲಾಗಿದೆ. 

ಇಲಾಖೆ ವಿಚಾರಣೆ ಕಾಯ್ದಿರಿಸಿ, ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಗರಡಗಲ್ಲು ಕಂದಾಯ ವೃತ್ತಕ್ಕೆ ವರ್ಗಾಯಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

2022ರ ಡಿಸೆಂಬರ್‌ನಲ್ಲಿ ಖಾಜಿ ಹೊಸಹಳ್ಳಿ ಗ್ರಾಮದ ನಿವಾಸಿ ಹಾಗೂ ದಲಿತ ಸಂಘರ್ಷ ಸಮಿತಿ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಪಿತ್ರಾರ್ಜಿತ ಆಸ್ತಿ ಪೋಡಿಗೆ ಅರ್ಜಿ ಸಲ್ಲಿಸಿದ್ದರು. 

ADVERTISEMENT

ಎರಡು ವರ್ಷ ಪೋಡಿ ಮಾಡದೆ ಅನಗತ್ಯ ವಿಳಂಬ ಮಾಡಿ ಮನೋಹರ್ ಸತಾಯಿಸಿದ್ದರು. ಭೂಮಾಪಕ ತಿಪ್ಪೇಸ್ವಾಮಿ, ಆರ್‌ಐ ಆನಂದ್ ಜೊತೆ ಸೇರಿ ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೋನ್ ಪೇ ಮೂಲಕ ₹40 ಸಾವಿರ, ₹60 ಸಾವಿರ ಲಂಚ ಪಾವತಿಸಿದ್ದೆ. ಲಂಚ ಪಡೆದ ನಂತರ ಜಮೀನು ಸರ್ವೆಮಾಡಿ ಅನುಬಂಧ 1 ರಿಂದ 5 ಮಾಡಿದ್ದರು. ಪೋಡಿ ವಿಳಂಬ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಬಾಕಿ ಹಣಕೊಟ್ಟಿಲ್ಲವೆಂದು ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಂಜುನಾಥ್ ಅಣ್ಣಯ್ಯ ದೂರು ನೀಡಿದ್ದರು.  

ಭೂಮಾಪಕ ತಿಪ್ಪೇಸ್ವಾಮಿ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲು ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಸೂಚನೆಯನ್ನು ನೀಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಧಕ್ಕಿದ ಫಲವಾಗಿದೆ ಎಂದು ಅವರು ಹೇಳಿದ್ದಾರೆ.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್.ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಲೋಕೇಶ್, ಸಂಘಟನಾ ಸಂಚಾಲಕ ಸಿ.ನಾರಾಯಣಸ್ವಾಮಿ, ಬೆಂಗಳೂರು ನಗರ ಸಂಘಟನಾ ಸಂಚಾಲಕ ಸುರೇಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.