ADVERTISEMENT

ದೊಡ್ಡಬಳ್ಳಾಪುರ: ಭೂಸುಧಾರಣೆ ಕಾಯ್ದೆ ತಿದ್ದುಪಡಿ ತಳಸಮುದಾಯಕ್ಕೆ ಮಾರಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:55 IST
Last Updated 15 ಜುಲೈ 2020, 16:55 IST
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ 79, 80 ಹಾಗೂ 63ರ ಕಲಂಗಳನ್ನು ರದ್ದುಗೊಳಿಸಿ, ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತಿರುವುದು ಖಂಡನೀಯ. ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ರಾಜ್ಯ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸಮಿತಿ ಸದಸ್ಯ ಪ್ರೊ.ಚಂದ್ರಪ್ಪ, ‘ಪರಿಶಿಷ್ಠ ಜಾತಿ, ವರ್ಗ, ಹಿಂದುಳಿದ ವರ್ಗಗಳು, ತಳಸಮುದಾಯಗಳು, ಭೂಹೀನರು, ಕೃಷಿ ಕಾರ್ಮಿಕರ ಪರವಾಗಿದ್ದ ಕಾಯ್ದೆಗಳಿಗೆ ಈಗ ರಾಜ್ಯ ಸರ್ಕಾರ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳು ಮತ್ತು ಕಾರ್ಪೋರೇಟ್‌ ಸಂಸ್ಥೆಗಳಿಗೆ ರತ್ನಗಂಬಳಿ ಹಾಸುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೃಷಿ ಹೆಸರಿನಲ್ಲಿ ಭೂಮಿಯನ್ನು ಹಸ್ತಾಂತರಿಸುವ ಹುನ್ನಾರ ಇದು. ಈಗಾಗಲೇ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಎಕರೆಗಳ ಭೂಮಿಯನ್ನು ಉದ್ಯಮಿಗಳಿಗೆ ನೀಡಲಾಗಿದೆ. ಇದು ಹೀಗೆಯೇ ಮುಂದುವರಿದರೆ ವ್ಯವಸಾಯಕ್ಕಾಗಿ ಕನಿಷ್ಠ ಭೂಮಿಯೂ ಉಳಿಯುವುದಿಲ್ಲ.

ADVERTISEMENT

ಭೂಸುಧಾರಣೆ ಕಾಯ್ದೆ ತಿದ್ದುಪಡಿ 2020 ಅನ್ನು ಹಿಂತೆಗೆದುಕೊಂಡು ಮರುಚಿಂತನೆಗೆ ಒಳಪಡಿಸಬೇಕು. ಭೂ ಹೋರಾಟಗಳಲ್ಲಿ ತೊಡಗಿರುವ ಸಂಘ ಸಂಸ್ಥೆಗಳು, ರೈತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳೊಂದಿಗೆ ಚರ್ಚೆ ನಡೆಸಿ, ಸೂಕ್ತ ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಿದರು.

ಕೃಷಿ ಸಂಬಂಧಿತ ಎಲ್ಲಾ ಚಟುವಟಿಕೆಗಳ ಪರಾಮರ್ಶೆಗೆ ಕಂದಾಯ ಇಲಾಖೆಯೊಂದಿಗೆ ಪರಿಶೀಲನಾ ಸಮಿತಿಗಳನ್ನು ರಚಿಸಬೇಕು. ಈ ಸಮಿತಿಯು ಕೃಷಿಕರ ಮೇಲೆ ನಿಗಾವಹಿಸಿ ಸೂಕ್ತ ಸಲಹೆ ಸರ್ಕಾರಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಯೋಜಕ ಕುರುಬರಹಳ್ಳಿ ಮುಂಜುನಾಥ, ಸದಸ್ಯರಾದ ಲಿಂಗನಹಳ್ಳಿ ಎ.ಮುನಿರಾಜ, ನಾಗಣ್ಣ, ಕಕ್ಕೇನಹಳ್ಳಿ ಮುನಿರಾಜು, ಮೂರ್ತಿ, ಕೊಡಿಗೇಹಳ್ಳಿ ನಾಗರಾಜು, ಅರದೇಶಹಳ್ಳಿ ಮನೋಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.