ADVERTISEMENT

ಚಾಣಕ್ಯ ವಿವಿಗೆ ಜಮೀನು: ವಿರೋಧ

ಭಾರತ ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:35 IST
Last Updated 19 ಆಗಸ್ಟ್ 2022, 4:35 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಚಾಣಕ್ಯ ವಿವಿಗೆ ಭೂ ಮಂಜೂರಾತಿ ವಿರೋಧಿಸಿ ಜಿಲ್ಲಾಡಳಿತ ಭವನದ ವಿರುದ್ಧ ಪ್ರತಿಭಟನೆ ನಡೆಯಿತು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಚಾಣಕ್ಯ ವಿವಿಗೆ ಭೂ ಮಂಜೂರಾತಿ ವಿರೋಧಿಸಿ ಜಿಲ್ಲಾಡಳಿತ ಭವನದ ವಿರುದ್ಧ ಪ್ರತಿಭಟನೆ ನಡೆಯಿತು   

ದೇವನಹಳ್ಳಿ: ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಕೈಗಾರಿಕೆ ಉದ್ದೇಶಕ್ಕೆ ಭೂಮಿ ಪಡೆದುಕೊಂಡು ಕೋಮುವಾದಿ ಸಿದ್ಧಾಂತ ಹೊಂದಿರುವ ಸಂಘಟನೆಗಳ ಸ್ಥಾಪನೆ ಮಾಡುತ್ತಿರುವ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದ್ದು, ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ದ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ ಮಾತನಾಡಿ, ‘ಕೆಐಎಡಿಬಿ ಮೊದಲನೇ ಹಂತದಲ್ಲಿ ಕೃಷಿ ಯೋಗ್ಯ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದಿದೆ. 116.1 ಎಕರೆ ಭೂಮಿಯನ್ನು ಕೇವಲ ₹ 50.17 ಕೋಟಿಗೆ ಖಾಸಗಿ ವಿಶ್ವವಿದ್ಯಾಲಯಕ್ಕೆ ನೀಡಿದೆ. ಕೈಗಾರಿಕೆ ಉದ್ದೇಶಕ್ಕಾಗಿ ವಶಕ್ಕೆ ಪಡೆದು ಇತರೆ ಉದ್ದೇಶಕ್ಕೆ ಭೂಮಿ ನೀಡಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಶೈಕ್ಷಣಿಕ ಕ್ಷೇತ್ರದ ಅನುಭವವಿಲ್ಲದೆ ಇರುವ ಬಿಜೆಪಿ ಪೋಷಿತ ಸಂಘಟನೆಗಳಿಗೆ ನಿಯಮಗಳನ್ನು ಗಾಳಿಗೆ ತೂರಿ ರೈತರ ಭೂಮಿ ನೀಡುತ್ತಿದ್ದಾರೆ. ಈ ಮಂಜೂರಾತಿಯಿಂದ ಸರ್ಕಾರದ ಬೊಕ್ಕಸಕ್ಕೆ ₹ 246 ಕೋಟಿ ನಷ್ಟವಾಗಿದೆ. ತರಾತುರಿಯಲ್ಲಿ ರಾಜ್ಯ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯದ ವಿಧೇಯಕಕ್ಕೆ ಅನುಮೋದನೆ ನೀಡಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಟೀಕಿಸಿದರು.

ADVERTISEMENT

ಸರ್ಕಾರದ ಈ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್‌ ಜಾರಿಯಾಗಿದೆ ಎಂದರು.

ರೈತರಿಂದ ಪ್ರತಿ ಎಕರೆಗೆ ₹ 1.61 ಕೋಟಿಗೆ ಭೂಮಿ ಸ್ವಾಧೀನಪಡಿಸಿಕೊಂಡು ಅದೇ ಜಾಗವನ್ನು ಅದರ ಅರ್ಧ ಬೆಲೆಗೆ ನೀಡಲಾಗಿದೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕವಾಗಿ ಉತ್ತಮವಾಗಿರುವ ವಿದ್ಯಾರ್ಥಿಗಳು ಬಂದು ಮಾದಕ ವಸ್ತುಗಳನ್ನು ಗ್ರಾಮೀಣ ಪ್ರದೇಶಕ್ಕೆ ಹರಡಿ ಇಲ್ಲಿನ ಸಮಾಜವನ್ನು ಹಾಳು ಮಾಡುತ್ತಾರೆ ಎಂದು ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಜಿ.ಸಿ.ಬೈಯಾರೆಡ್ಡಿ ಮಾತನಾಡಿ,ಕೈಗಾರಿಕೆಗಳ ಸ್ಥಾಪನೆ ಮೂಲಕ ಅಭಿವೃದ್ಧಿ ಮಾಡುತ್ತೇವೆಂದು ಅನ್ನದಾತರಿಗೆ ನಂಬಿಸಲಾಗಿತ್ತು. ಅಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಒಂದು ಸಣ್ಣ ಕೈಗಾರಿಕೆಯನ್ನೂ ಸ್ಥಾಪಿಸದೆ ಮೋಸ ಮಾಡಿದ್ದಾರೆ. ಯಾವುದೇ ಶೈಕ್ಷಣಿಕ ಅನುಭವವಿಲ್ಲದ ಸಂಸ್ಥೆಗೆ ನೂರಾರು ಎಕರೆ ಭೂಮಿ ನೀಡಿದ್ದಾರೆ. ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ದೇವನಹಳ್ಳಿ ತಾಲ್ಲೂಕಿನಲ್ಲಿ ಭೂ ಸ್ವಾಧೀನ, ಅಕ್ರಮ ಮಾರಾಟ ಪ್ರಕರಣಗಳು ಹೆಚ್ಚಾಗಿವೆ. ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಿಗೆ ಇಲ್ಲಿನ ಭೂಮಿ ನೀಡಲಾಗುತ್ತಿದೆ ಎಂದು ದೂರಿದರು.

ಮೊದಲ ಹಂತದಲ್ಲಿ 1,300 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಸರೇ ಕಳೆದ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡಲಾಗುತ್ತಿದೆ. ಅದರ ಸ್ಥಾಪನೆ, ವಿದ್ಯಾರ್ಥಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದೇವನಹಳ್ಳಿಯನ್ನು ಕೋಮುವಾದಿ ಕೇಂದ್ರವಾಗಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್‌. ಲತಾ,ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಮುಖಂಡರಾದ ಎಸ್‌. ರುದ್ರಾರಾಧ್ಯ, ಹರೀಂದ್ರ, ಪಿ.ಎ. ವೆಂಕಟೇಶ್, ಮೋಹನ್‌ ಬಾಬು, ನರಸಿಂಹಮೂರ್ತಿ, ಬಸವರಾಜು, ವೆಂಕಟರಾಜು ಹಾಗೂ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.