ADVERTISEMENT

ದೇವನಹಳ್ಳಿ: ಬಣ ರಾಜಕೀಯ ಶಮನಕ್ಕೆ ಮುಖಂಡರ ತಂತ್ರ

ಕಾಂಗ್ರೆಸ್‌ ಪಕ್ಷವೇ ಅಭ್ಯರ್ಥಿ: ಗೆಲ್ಲುವಿಗೆ ಎಲ್ಲರೂ ಒಗ್ಗಟ್ಟಾಗಿ ಇರೋಣ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 5:01 IST
Last Updated 24 ಮಾರ್ಚ್ 2023, 5:01 IST
ದೇವನಹಳ್ಳಿಯ ಯುವ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ದೇವನಹಳ್ಳಿಯ ಯುವ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ದೇವನಹಳ್ಳಿ: ‘ದೇವನಹಳ್ಳಿ ಮೀಸಲು ಕ್ಷೇತ್ರವಾಗಿ ಘೋಷಣೆಯಾದ ಬಳಿಕ ಈವರೆಗೂ ದಲಿತ ಎಡಗೈ ಸಮುದಾಯಕ್ಕೆ ಟಿಕೆಟ್‌ ನೀಡಿಲ್ಲ, ಈ ಬಾರಿ ಆ ಅವಕಾಶ ಸಿಗುವ ಸಾಧ್ಯತೆ ಇದೆ. ಹೈ ಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಬಣ ರಾಜಕೀಯ ಬಿಟ್ಟು, ಪಕ್ಷದ ಗೆಲುವಿಗೆ ಶ್ರಮಿಸೋಣ’ ಎಂದು ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆ.ಎಚ್‌.ಮುನಿಯಪ್ಪ ಅವರಿಗೆ ಟಿಕೆಟ್‌ ನೀಡುವ ಹಿನ್ನಲೆಯಲ್ಲಿ ಕೆಲವರು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಅವರೂ ಈ ಹಿಂದೆ ಹೈ ಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದಿದ್ದನ್ನು ಮರೆತ್ತಿದ್ದಾರೆ’ ಎಂದು ಹೇಳಿದರು.

ಬಿದಲೂರು ಗ್ರಾ.ಪಂ ಸದಸ್ಯ ಎಸ್‌.ಪಿ.ಮುನಿರಾಜು ಮಾತನಾಡಿ, ‘ವ್ಯಕ್ತಿ ಪೂಜೆಗಿಂತ ಪಕ್ಷವೇ ಮುಖ್ಯ. ಪಕ್ಷವೇ ಅಭ್ಯರ್ಥಿ ಎಂದು ಭಾವಿಸಿ ಕಾರ್ಯಕರ್ತರು ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿ ಆದರೂ ಅವರನ್ನು ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಬೇಕು. ಗೊಂದಲಕ್ಕೆ ಒಳಗಾಗದೇ ಪಕ್ಷದ ಗೆಲುವಿಗೆ ಶ್ರಮಿಸೋಣ’ ಎಂದು ಹೇಳಿದರು.

ADVERTISEMENT

ತೂಬಗೆರೆ ಹೋಬಳಿ ಮುಖಂಡ ಚಿದಾನಂದ್ ಮಾತನಾಡಿ, ‘ಮಾಜಿ ಸಂಸದ ವೀರಪ್ಪ ಮೊಯಿಲಿರವರು ಕ್ಷೇತ್ರಕ್ಕೆ ಬಂದಾಗ ಯಾರೂ ಹೊರಗಿನ ವ್ಯಕ್ತಿ ಎಂದು ಭಾವಿಸಿಲ್ಲ. ಇಲ್ಲಿ ಯಾರು ಒಳಗಿನವರು ಮತ್ತು ಹೊರಗಿನವರು ಎಂಬ ಬೇಧವಿಲ್ಲ. ಇಲ್ಲಿ ಮುಖ್ಯವಾಗಿರುವುದು ಗೆಲ್ಲುವಿನ ಮಾನದಂಡದಲ್ಲಿ ಟಿಕೆಟ್‌ ನೀಡಲಾಗುತ್ತದೆ’ ಎಂದರು.

‘ಸಿಎಲ್‌ಪಿ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪರಿಗೆ ದೇವನಹಳ್ಳಿಯಲ್ಲಿ ಟಿಕೆಟ್‌ ನೀಡಲು ನಿರ್ಧಾರಿಸಿರುವ ಮಾಹಿತಿ ಇದೆ. ಇದರಿಂದ ಸಾಕಷ್ಟು ಜನ ಆಕಾಂಕ್ಷಿಗಳಲ್ಲಿ ಹತಾಶೆಯಿಂದ ಪಕ್ಷಕ್ಕೆ ರಾಜೀನಾಮೆ ನೀಡುವ ಮಾತು ಹಾಡಿದ್ದಾರೆ. ಆದರೆ, ಎಲ್ಲರನ್ನು ಸಮಾಧಾನ ಪಡಿಸಿಕೊಂಡು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಧ್ಯೇಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚನ್ನಹಳ್ಳಿ ರಾಜಣ್ಣ ತಿಳಿಸಿದರು.

ಕಾಂಗ್ರೆಸ್ ಎಸ್‌.ಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಮುಖಂಡರಾದ ಕೆ.ವಿ.ಸ್ವಾಮಿ, ಡಿ.ಎಂ.ದೇವರಾಜ್, ರಾಘವೇಂದ್ರ, ದೇವರಾಜ್, ರಾಧಕೃಷ್ಣ, ಗೋಪಾಲ್, ಅಶ್ವತ್, ವೇಣು, ಹರ್ಷಿತ್‌ಗೌಡ, ಹರೀಶ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.