ADVERTISEMENT

ನಾಯಕತ್ವ ಗುಣ ಬೆಳೆಯಲು ಸಹಕಾರಿ: ಯು.ಟಿ.ಖಾದರ್

ಜಾಂಬೋರೇಟ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿರುವ ಯು.ಟಿ.ಖಾದರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 15:00 IST
Last Updated 30 ಡಿಸೆಂಬರ್ 2019, 15:00 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ದೊಡ್ಡಬಳ್ಳಾಪುರ: ‘ಮಂಗಳೂರಿನ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವದಲ್ಲಿ ಸಚಿವರು ಧ್ವಜಾರೋಹಣ ಮಾಡುವಾಗ ಸೆಂಟ್‌ ಅಲೋಸಿಸ್ ಶಾಲೆ ವಿದ್ಯಾರ್ಥಿ ಆಗಿದ್ದೆ. ಇದೇ ರೀತಿ ಧ್ವಜಾರೋಹಣ ಮಾಡುವ ಕನಸು ಕಂಡಿದ್ದೆ. ಈಗ ನನಸಾಯಿತು’ ಎಂದು ಶಾಸಕ ಯು.ಟಿ ಖಾದರ್‌ ನೆನಪುಗಳನ್ನು ಮೆಲುಕು ಹಾಕಿದರು.

‌ನಗರದ ಆನಿಬೆಸೆಂಟ್‌ ಪಾರ್ಕ್‌ನಲ್ಲಿ ನಡೆದ 28ನೇ ಜಾಂಬೋರೇಟ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿರುವ ಯು.ಟಿ.ಖಾದರ್‌, ‘1981ರಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಇದ್ದಾಗ ಆ ಸಂದರ್ಭದ ಕ್ಷಣಗಳತ್ತ ಜಾರಿದರು. ‘ಆನಿಬೆಸೆಂಟ್‌ ಪಾರ್ಕ್‌ನಲ್ಲಿ ನಡೆದಿದ್ದ ಜಾಂಬೋರೇಟ್‌ನಲ್ಲಿ ಭಾಗವಹಿಸಿದ್ದು ನನ್ನ ಪ್ರಥಮ ಕ್ಯಾಂಪ್‌. ನಂತರ 1985ರಲ್ಲಿ ಬೆಂಗಳೂರಿನ ಪ್ಯಾಲೇಸ್‌ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಜಾಂಬೋರಿಯಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದೆ. 2016ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಜಾಂಬೋರಿಯಲ್ಲಿ ಸಚಿವನಾಗಿ ಭಾಗವಹಿಸಿದ್ದು, ಮಂಗಳೂರಿನ ನೆಹರೂ ಮೈದಾನದಲ್ಲಿ ಸಚಿವನಾಗಿ ರಾಷ್ಟ್ರ ಧ್ವಜ ಹಾರಿಸಿದ್ದು ಇದೆಲ್ಲ ಸಾಧ್ಯವಾಗಲು ಆತ್ಮಶಕ್ತಿ ಬೆಳೆಸಿದ್ದು’ ಸ್ಕೌಟ್‌ ಮತ್ತು ಗೈಡ್ಸ್‌ ಎಂದರು.

1981ರಲ್ಲಿ ನಡೆದ ಇಲ್ಲಿನ ಜಾಂಬೋರೇಟ್‌ಗೆ ಬಂದಿದ್ದು ಕೂಡ ರೋಚಕ ಅನುಭವ. ಮಂಗಳೂರಿನಿಂದ ಮೀಟರ್‌ ಗೇಜ್‌ ರೈಲಿನಲ್ಲಿ ಮಲಗಲು ಸ್ಥಳ ಇಲ್ಲದೆ ಹಗ್ಗ ಕಟ್ಟಿಕೊಂಡು ಮಲಗಿದ್ದು, ಇಲ್ಲಿನ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದ್ದ ನೆನಪು ಇಂದಿಗೂ ಅಚ್ಚಹಸಿರಾಗಿದೆ. ಹೀಗಾಗಿಯೇ ಆನಿಬೆಸೆಂಟ್‌ ಪಾರ್ಕ್‌ ಕಾರ್ಯಕ್ರಮಕ್ಕೆ ಬರುವುದೆಂದರೆ ಖುಷಿ ಅನ್ನಿಸುತ್ತದೆ ಎಂದು ಹೇಳಿದರು.

ADVERTISEMENT

ಪರಿಸರ ಚಟುವಟಿಕೆಗಳಿಗೆ ಪ್ರಥಮ ಆದ್ಯತೆ: 28ನೇ ಜಾಂಬೋರೇಟ್‌ನಲ್ಲಿ ಪರಿಸರ, ನೀರಿನ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಹೇಳಿದರು.

ಮೂರನೇ ದಿನ ಜಾಂಬೋರೇಟ್‌ ಶಿಬಿರದಲ್ಲಿನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ವಿವಿಧ ರೀತಿಯ ಸುಮಾರು 20ಸಾವಿರ ಬೀಜದ ಉಂಡೆಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸುತ್ತಿದ್ದಾರೆ. ಇದಕ್ಕೆ ತರಬೇತಿ ನೀಡಲಾಗಿದೆ. ಆನಿಬೆಸೆಂಟ್‌ ಪಾರ್ಕ್‌ನಲ್ಲಿ ಪಾಳುಬಿದ್ದಿದ್ದ ಬಾವಿ ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹ ಮಾಡಲು ಸಿದ್ಧಗೊಳಿಸಲಾಗಿದೆ. ಇದಲ್ಲದೆ ಮಳೆ ನೀರು ಇಂಗಿಸಲು ಗುಂಡಿಗಳನ್ನು ತೋಡಿಸಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ, ಸಾಹಸ ಕ್ರೀಡೆಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ಸಂತಸವಾಗಿ ಭಾಗವಹಿಸುತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.