ADVERTISEMENT

ವೀಳ್ಯದೆಲೆ ಬೆಲೆ ಗಗನಮುಖಿ

ಜಿಲ್ಲೆಯಲ್ಲಿ ಅಕ್ಟೋಬರ್‌–ನವೆಂಬರ್‌ನಲ್ಲಿ ಸುರಿದ ಅತಿ ಮಳೆಯಿಂದ ಕೊಳೆತ ಬಳ್ಳಿ

ನಟರಾಜ ನಾಗಸಂದ್ರ
Published 16 ಫೆಬ್ರುವರಿ 2022, 7:01 IST
Last Updated 16 ಫೆಬ್ರುವರಿ 2022, 7:01 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಅಡಿಕೆ ತೋಟದಲ್ಲಿ ವೀಳ್ಯದ ಎಲೆ ಬಳ್ಳಿ
ದೊಡ್ಡಬಳ್ಳಾಪುರ ತಾಲ್ಲೂಕಿನ ಅಡಿಕೆ ತೋಟದಲ್ಲಿ ವೀಳ್ಯದ ಎಲೆ ಬಳ್ಳಿ   

ದೊಡ್ಡಬಳ್ಳಾಪುರ: ವೀಳ್ಯದ ಎಲೆಗಳ ಬೆಲೆ ಗಗನಕ್ಕೆ ಏರಿದ್ದು, ಅಡಿಕೆ ಎಲೆ ಜಿಗಿಯುವವರು ಹಾಗೂ ಶುಭ ಕಾರ್ಯಮಾಡುವವರ ಜೇಬಿಗೆ ಕತ್ತರಿ ಬಿದ್ದಿದೆ. ನೂರು ಎಲೆಗಳನ್ನು ಒಳಗೊಂಡ ಒಂದು ಕಟ್ಟು ಎಲೆಯ ಬೆಲೆ ₹100ರಿಂದ ₹150ಗಳವರೆಗೂ ಮುಟ್ಟಿದೆ.

ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಬಿಟ್ಟು ಬಿಡದಂತೆ ಸುರಿದ ಮಳೆಯಿಂದಾಗಿ ಎಲೆಗಳ ಬಳ್ಳಿ ಕೊಳೆತಿದ್ದರಿಂದ ಬಳ್ಳಿ ಸರಿಯಾಗಿ ಮುಂದೆ ಸಾಗಲಿಲ್ಲ. ಅಲ್ಲದೆ ಜನವರಿ ತಿಂಗಳ ನಂತರ ಸಾಮಾನ್ಯವಾಗಿ ಎಲೆ ಬಳ್ಳಿಗಳು ಚಿಗುರಿ ಬಳ್ಳಿ ಮುಂದೆ ಸಾಗಲು ಆರಂಭಿಸುತ್ತವೆ. ಈ ಎಲ್ಲಾ ಕಾರಣಗಳಿಂದ ವೀಳ್ಯದ ಎಲೆಯ ಬೆಲೆ ಗಗನಕ್ಕೆ ಏರಲು ಕಾರಣವಾಗಿದೆ ಎನ್ನುತ್ತಾರೆ ತಿಪ್ಪೂರು ಗ್ರಾಮದ ವೀಳ್ಯದ ಎಲೆ ಬೆಳೆಗಾರ ರಾಮಕೃಷ್ಣ.

‘ನಮ್ಮ ತಾಲ್ಲೂಕಿನಲ್ಲಿ ಬೆಳೆಯುವ ಎಲೆ ಸಾಕಾಗುವುದಿಲ್ಲ. ಹೀಗಾಗಿ ತುಮಕೂರು, ಹಿರಿಯೂರು, ದಾವಣಗೆರೆ, ಚನ್ನಗಿರಿ ಭಾಗದಿಂದ ಹೆಚ್ಚಿನ ಎಲೆ ಇಲ್ಲಿಗೆ ಬರುತ್ತವೆ. ಆದರೆ ಈ ಬಾರಿ ತುಮಕೂರು, ದಾವಣಗೆರೆ ಭಾಗದಲ್ಲೂ ಮಳೆ ಹೆಚ್ಚಾಗಿದ್ದರಿಂದ ಎಲೆ ಬಳ್ಳಿ, ಬೇರುಗಳು ಕೊಳೆತು ಹೋಗಿವೆ. ಈಗಷ್ಟೇ ಮತ್ತೆ ಬಳ್ಳಿಗಳು ಚಿಗುರೊಡೆಯುತ್ತಿವೆ. ಇನ್ನು ಒಂದು ತಿಂಗಳ ಕಾಲವಾದರು ವೀಳ್ಯದ ಎಲೆ ಬೆಲೆ ಹೀಗೆ ಇರಲಿದೆ’ ಎಂದರು.

ADVERTISEMENT

ತಾಲ್ಲೂಕಿನ ದೊಡ್ಡಬೆಳವಂಗಲ ಹಾಗೂ ಮಧುರೆ ಹೋಬಳಿಯಲ್ಲಿನ ರೈತರು ಅಡಿಕೆ ತೋಟಗಳಲ್ಲಿ ವೀಳ್ಯದ ಎಲೆಯನ್ನು ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಎಲೆಯ ಬಳ್ಳಿಗೆ ಆಸರೆ ಬೇಕಾಗಿರುವುದರಿಂದ ಬಹುತೇಕ ರೈತರು ಎಲೆಗಳನ್ನು ಅಡಿಕೆ ತೋಟಗಳಲ್ಲೇ ಬೆಳೆಯುತ್ತಾರೆ.

‘ಎಲೆ ಬೆಳೆಯುವ ರೈತರು ಅಡಿಕೆಗೆ ಹೆಚ್ಚಿನ ಗೊಬ್ಬರ, ಬೇಸಿಗೆಯಲ್ಲಿ ನೀರು ಸೇರಿದಂತೆ ಮುತುವರ್ಜಿ ವಹಿಸಿ ಬೇಸಾಯ ಮಾಡುತ್ತಾರೆ. ಇಲ್ಲವಾದರೆ ಅಡಿಕೆ, ಎಲೆ ಎರಡೂ ಸರಿಯಾಗಿ ಬೆಳೆ ಬಾರದೆ ಅಡಿಕೆ ಇಳುವರಿಯು ಕುಸಿತವಾಗುತ್ತದೆ. ವೀಳ್ಯದ ಎಲೆಗಳು ಅಗಲವಾಗಿ ಬಂದರಷ್ಟೆ ಮಾರುಕಟ್ಟೆಯಲ್ಲಿ ಬೇಡಿಕೆ, ಬೆಲೆ ಎರಡೂ ದೊರೆಯಲು ಸಾಧ್ಯ’ ಎನ್ನುತ್ತಾರೆ ಮಧುರುನಹೊಸಹಳ್ಳಿ ಗ್ರಾಮದ ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.