ADVERTISEMENT

ಕನ್ನಡ ಅನುಷ್ಠಾನಕ್ಕೆ ಕಾನೂನು ಬಲ

ರಾಜ್ಯ ಸರ್ಕಾರದ ನಿಲುವಿಗೆ ಕರ್ನಾಟಕ ರಕ್ಷಣಾ ವೇದಿಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:55 IST
Last Updated 29 ಸೆಪ್ಟೆಂಬರ್ 2022, 5:55 IST
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು   

ದೇವನಹಳ್ಳಿ: ‘ರಾಜ್ಯ ಸರ್ಕಾರ ಸಮರ್ಪಕವಾಗಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಸದನದಲ್ಲಿ ಮಸೂದೆ ಮಂಡಿಸಿ ಕಾನೂನಿನ ಬಲ ನೀಡಲು ಮುಂದಾಗಿರುವುದು ಕನ್ನಡಿಗರ ಸಾರ್ವಭೌಮತ್ವ ಹೆಚ್ಚಿಸುವಂತಹ ಕಾರ್ಯವಾಗಿದೆ. ಇದನ್ನು ಕನ್ನಡ ರಕ್ಷಣಾ ವೇದಿಕೆ ಶ್ಲಾಘಿಸುತ್ತದೆ’ ಎಂದು ಕರವೇ ರಾಜ್ಯ ಸಮಿತಿ ಸದಸ್ಯ ಅಂಬರೀಶ್‌ ಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರವೇ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕನ್ನಡ, ಕರ್ನಾಟಕ, ಕನ್ನಡಿಗ ಎಂಬ ತತ್ವದಲ್ಲಿ ತಾಯಿ ಭುವನೇಶ್ವರಿಯ ಆಶೀರ್ವಾದದೊಂದಿಗೆ ಕನ್ನಡದ ಕೆಲಸ ಮಾಡಲು ಮುಂದಾಗುತ್ತೇವೆ ಎಂದರು.

ADVERTISEMENT

ಅನ್ಯ ಭಾಷಿಕರ ದಬ್ಬಾಳಿಕೆಯನ್ನು ಖಂಡಿಸುತ್ತೇವೆ. ಬೇರೆ ಭಾಷೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ನಾಮಫಲಕಗಳ ಬದಲಾವಣೆಗೆ ಆಗ್ರಹಿಸುತ್ತೇವೆ. ವಲಸಿಗರು ನೆಲದ ಭಾಷೆ ಬಳಸಲು ಮುಂದಾಗಬೇಕು. ಭಾಷೆ ಬಳಕೆಗೆ ಕಾನೂನು ಶಕ್ತಿ ನೀಡುತ್ತಿರುವುದು ಕನ್ನಡಪರ ಹೋರಾಟಗಾರರಿಗೆ ದೊಡ್ಡ ಶಕ್ತಿಯಾಗಲಿದೆ ಎಂದರು.

ಸ್ಥಳೀಯರಿಗೆ ಟೋಲ್‌ ವಿಚಾರವಾಗಿ ಸಾಕಷ್ಟು ತೊಂದರೆಯಾಗುತ್ತಿದೆ ಎಂಬುದು ಗಮನದಲ್ಲಿದ್ದು, ಶೀಘ್ರದಲ್ಲಿಯೇ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿಯೇ ಹೆಚ್ಚಿನ ದರದ ಟೋಲ್‌ ಇದಾಗಿದೆ. ಯಲಹಂಕದಲ್ಲಿ ರೈತಾಪಿ ವರ್ಗ ಮಾರುಕಟ್ಟೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಬಳಸುವುದು ಅನಿವಾರ್ಯವಾಗಿದೆ. ಉಚಿತ ಪಾಸ್‌ ನೀಡಲು ಅವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ನಿಲೇರಿ ಎಂ.ಜೆ. ಶ್ರೀನಿವಾಸ್‌, ಮಾರೇಗೌಡ, ಮಣಿ, ದೊಡ್ಡಬಳ್ಳಾಪುರದ ಬಾಬು, ದೇವನಹಳ್ಳಿ ನವೀನ್‌ ಕುಮಾರ್‌, ವಿನಯ್‌ ಕುಮಾರ್‌, ಆವತಿ ಮಾರೇಗೌಡ, ಕೋಡಗುರ್ಕಿ ಶ್ರೀನಿವಾಸ್‌, ಸನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.