ADVERTISEMENT

ಸಮಾನತೆ ಬದುಕು ಮಾದರಿಯಾಗಲಿ: ಟಿ. ಭರತ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 4:19 IST
Last Updated 27 ನವೆಂಬರ್ 2022, 4:19 IST
ವಿಜಯಪುರ ಪಟ್ಟಣದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು
ವಿಜಯಪುರ ಪಟ್ಟಣದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು   

ವಿಜಯಪುರ (ಬೆಂ.ಗ್ರಾಮಾಂತರ): ಪಟ್ಟಣದ ಜಿಕೆಬಿಎಂಎಸ್ ಸರ್ಕಾರಿ ಶಾಲಾ ಆವರಣದಲ್ಲಿ ಶನಿವಾರ ಕರ್ನಾಟಕ ದಲಿತ ಸೇನೆ ಹಾಗೂ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಡಿ ಸಂವಿಧಾನ ದಿನಾಚರಣೆ ನಡೆಯಿತು.

ಶಾಲಾ ಮಕ್ಕಳು ಸೇರಿದಂತೆ ಶಿಕ್ಷಕರು, ಸಂಘಟನಕಾರರು, ಸಂವಿಧಾನ ಪೀಠಿಕೆ ಓದಿ ಸಂವಿಧಾನದಡಿ ಬದುಕುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕರ್ನಾಟಕ ದಲಿತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಟಿ. ಭರತ್ ಮಾತನಾಡಿ, ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶವೆಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಿದೆ ಎಂದರು.

ADVERTISEMENT

ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅದರಡಿ ನಾವೆಲ್ಲರೂ ಜಾತಿ, ಮತ, ಧರ್ಮ ರಹಿತವಾಗಿ ಸಮಾನತೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶೈಲಜಾ ಮಾತನಾಡಿ, ಸಂವಿಧಾನ ರಚಿಸುವಾಗ ಸಮಾಜದ ವಿವಿಧ ಸಾಮಾಜಿಕ-ರಾಜಕೀಯ ಮತ್ತು ಆರ್ಥಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕರಡು ಸಮಿತಿಯು ಮೌಲ್ಯಯುತವಾದ ಒಳಹರಿವು ಪಡೆಯಲು ಬ್ರಿಟನ್, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ ಇತರೆ ಕೌಂಟಿಗಳ ಸಂವಿಧಾನಗಳನ್ನು ಉಲ್ಲೇಖಿಸಿದೆ. ಪ್ರಪಂಚದಲ್ಲಿಯೇ ಅತ್ಯುತ್ತಮ ಸಂವಿಧಾನ ಹೊಂದಿರುವ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡು ಬದುಕಬೇಕು ಎಂದರು.

ಸಿಆರ್‌ಪಿ ದಿನೇಶ್ ಮಾತನಾಡಿ, ಭಾರತದ ಸಂವಿಧಾನವು ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ರಾಜ್ಯ ನೀತಿಯ ನಿರ್ದೇಶನ ತತ್ವಗಳು ಮತ್ತು ಫೆಡರಲ್ ಸರ್ಕಾರದ ರಚನೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ಪ್ರತಿಯೊಂದು ನೀತಿ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಂವಿಧಾನದಲ್ಲಿ ಸುದೀರ್ಘವಾಗಿ ವಿವರಿಸಲಾಗಿದೆ. ಆ ಮೂಲಕ ವಿಶ್ವದ ಅತಿದೊಡ್ಡದಾದ ಲಿಖಿತ ಸಂವಿಧಾನವಾಗಿದೆ ಎಂದರು.

ಸಂಘಟನೆಯ ಮುಖಂಡರಾದ ಜಗದೀಶ್, ಪ್ರಕಾಶ್, ರಾಮಕೃಷ್ಣ, ಮುನಿಕೃಷ್ಣಪ್ಪ, ಪ್ರವೀಣ್, ಮುಖ್ಯಶಿಕ್ಷಕಿ ಸುಜಾತಮ್ಮ, ಸಹಶಿಕ್ಷಕರಾದ ಭಾರತಿ, ನಾಗರತ್ನ, ಪವಿತ್ರಾ ಬೋಸ್ಲೆ, ಗುಲ್ಜಾರ್, ವಿಜಯಲಕ್ಷ್ಮೀ, ಅನಸೂಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.