ADVERTISEMENT

ಕಲಾವಿದರ ಬದುಕು ಹಸನಾಗಲಿ

ಹಾರೋಹಳ್ಳಿಯಲ್ಲಿ 74ನೇ ಮಾಸದ ಕನ್ನಡ ದೀಪ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 8:34 IST
Last Updated 4 ಫೆಬ್ರುವರಿ 2021, 8:34 IST
ವಿಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿದರು
ವಿಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿದರು   

ವಿಜಯಪುರ: ಜಾನಪದ ಕಲೆಗಳು ಹಳ್ಳಿಯ ಜನರ ಜೀವನಾಡಿ. ಜನರ ಸಂಪ್ರದಾಯ, ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಂತಹ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವಂತಹ ಕಾರ್ಯವಾಗಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಹೇಳಿದರು.

ಹೋಬಳಿಯ ಹಾರೋಹಳ್ಳಿಯ ಎನ್. ರಾಜಗೋಪಾಲ್ ಅವರ ಮನೆಯ ಆವರಣದಲ್ಲಿ ಕನ್ನಡ ಕಲಾವಿದರ ಸಂಘದಿಂದ ಆಯೋಜಿಸಿದ್ದ 24ನೇ ವರ್ಷದ ವಾರ್ಷಿಕೋತ್ಸವ ಹಾಗೂ 74ನೇ ಮಾಸದ ಕನ್ನಡ ದೀಪ ಕಾರ್ಯಕ್ರಮದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲಾವಿದರ ಬದುಕು ಹಸನಾಗ ಬೇಕು. ಅವರ ಜೀವನೋಪಾಯಕ್ಕೆ ಭದ್ರತೆ ಬೇಕು. ಆಗಮಾತ್ರ ಎಲ್ಲಾ ಕಲೆಗಳು ಉಳಿಯಲು ಸಾಧ್ಯ. ಅದಕ್ಕೆ ನಾವೆಲ್ಲರೂ ಸ್ಪಂದಿಸಬೇಕು. ಹಿರಿಯ ರಂಗ ಕಲಾವಿದರನ್ನು ಗುರುತಿಸಿ ಗೌರವಿಸುವುದಿರಲಿ. ಅವರನ್ನು ಕಣ್ಣೆತ್ತಿ ನೋಡಲೂ ಮನಸ್ಸು ಮಾಡದ ವಾತಾವರಣ ಸೃಷ್ಟಿಯಾಗುತ್ತಿರುವುದು ಅತ್ಯಂತ ವಿಷಾದದ ಸಂಗತಿ. ಕಲೆ ಮಾರಾಟದ ಸರಕಾಗಿ ಪರಿಣಮಿಸುತ್ತಿರುವುದು ರಂಗಭೂಮಿಯ ಜೀವಂತಿಕೆಗೆ ಕೊಡಲಿಪೆಟ್ಟು ನೀಡುತ್ತಿದೆ ಎಂದರು.

ADVERTISEMENT

ಬಿಕೆಎಸ್ ಪ್ರತಿಷ್ಠಾ‌ನದ ಸಂಸ್ಥಾಪಕ ಬಿ.ಕೆ. ಶಿವಪ್ಪ ಮಾತನಾಡಿ, ತಂತ್ರಜ್ಞಾನದ ಪ್ರಗತಿಯಾದಂತೆಲ್ಲಾ ಕಲಾವಿದರ ಸಂಖ್ಯೆಯಲ್ಲಿ ಬೆಳವಣೆಗೆಯಾಗುತ್ತಿದ್ದರೂ ಕಲಾ ಮಾನ್ಯತೆ ಕಡಿಮೆಯಾಗಿದೆ. ವೃತ್ತಿ ರಂಗಭೂಮಿಯ ಕಲಾವಿದರ ಬದುಕು ಮೂರಾಬಟ್ಟೆಯಾಗುತ್ತಿದೆ ಎಂದು ಹೇಳಿದರು.

ಹಿರಿಯ ಕಲಾವಿದ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ನಾಲ್ಕಾರು ದಶಕಗಳಿಂದ ರಂಗ ಕಲಾವಿದರಾಗಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿರುವವರಿಗೆ ಸ್ವಂತಕ್ಕಾಗಿ ಒಂದು ನಿವೇಶನವನ್ನೂ ಮಾಡಿಕೊಳ್ಳಲಾಗದ ಸ್ಥಿತಿಯಿದೆ. ಬೇರೆ ರಾಜ್ಯಗಳಲ್ಲಿ ಇಂತಹ ವಾತಾವರಣವಿಲ್ಲ ಎಂದು ತಿಳಿಸಿದರು.

ಎಂ.ವಿ. ನಾಯ್ಡು ತಂಡದಿಂದ ರಂಗಗೀತೆಗಳ ಕಾರ್ಯಕ್ರಮ ನಡೆಯಿತು. ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು, ಮುಖಂಡರಾದ ವಿ.ಎನ್. ರಮೇಶ್, ಚಂದ್ರಶೇಖರ ಹಡಪದ್, ನಂಜೇಗೌಡ, ಜೆ.ಎನ್. ಶ್ರೀನಿವಾಸ್, ಹನೀಫ್‌ಉಲ್ಲಾ, ಬಲಮುರಿ ಶ್ರೀನಿವಾಸ್, ಕನಕರಾಜು, ಎಸ್. ರವಿಕುಮಾರ್, ಮಾಧವಿ, ಸುಬ್ರಮಣಿ, ಭೈರೇಗೌಡ, ರಮ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.