ADVERTISEMENT

ಜನೋತ್ಸವ ರೈತೋತ್ಸವವಾಗಲಿ: ಹೋರಾಟ ಸಮಿತಿ ಒತ್ತಾಯ

ಸರ್ಕಾರಕ್ಕೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 7:09 IST
Last Updated 8 ಸೆಪ್ಟೆಂಬರ್ 2022, 7:09 IST
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಭೂಸ್ವಾಧೀನ ಹೋರಾಟ ಸಮಿತಿಯ ಸದಸ್ಯರು ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯುವಂತೆ ಒತ್ತಾಯಿಸಿ ಸಭೆ ನಡೆಸಿದರು
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಭೂಸ್ವಾಧೀನ ಹೋರಾಟ ಸಮಿತಿಯ ಸದಸ್ಯರು ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯುವಂತೆ ಒತ್ತಾಯಿಸಿ ಸಭೆ ನಡೆಸಿದರು   

ದೇವನಹಳ್ಳಿ: ‘ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಜನೋತ್ಸವವು ರೈತರ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆ ನಿಲ್ಲಿಸುವ ರೈತೋತ್ಸವವಾಗಲಿ’ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರಿ ಮಳೆಗೆ ನೊಂದು ಆಶ್ರಯಕ್ಕಾಗಿ ಅಂಗಲಾಚುತ್ತಿರುವ ಆಕ್ರಂದನ ಒಂದೆಡೆಯಾದರೆ ಕೈಗೆ ಬಂದ ಫಸಲು ನೀರು ಪಾಲಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಕೆರೆ, ಕುಂಟೆಗಳು ಭರ್ತಿಯಾಗಿ ಒಡೆಯುವ ಅಪಾಯದಲ್ಲಿವೆ’ ಎಂದರು.

ರಾಜ್ಯದ ಜನತೆಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಮಾವೇಶಗಳ ಅವಶ್ಯಕತೆಯಾದರೂ ಏನಿದೆ. ನೈಜವಾಗಿ ಜನೋತ್ಸವ ಸಾರ್ಥಕವಾಗಬೇಕಿದ್ದರೆ ಕಳೆದ 160 ದಿನಗಳಿಂದ ಚನ್ನರಾಯಪಟ್ಟಣ ಭಾಗದ ರೈತರು ಭೂ ಸ್ವಾಧೀನ ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ಅರ್ಥೈಸಿಕೊಂಡು ಜನೋತ್ಸವದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತ ಪರವಾಗಿದ್ದೇವೆಂದು ರಾಜ್ಯದ ಜನತೆಗೆ ಸಾರುವ ಕೆಲಸವಾಗಬೇಕಿದೆ ಎಂದರು.

ADVERTISEMENT

ಭೂಸ್ವಾಧೀನ ಹೋರಾಟದ ಬಗ್ಗೆ ಮುಖ್ಯಮಂತ್ರಿಗೆ ಅವರಿಗೆ ಅರಿವಿದೆ. ಆದರೂ, ಇದುವರೆವಿಗೂ ರೈತರ ಹಿತಾಸಕ್ತಿ ಸಾರುವ ಒಂದು ಆದೇಶವೂ ಹೊರಬಂದಿಲ್ಲ. ಕೈಗಾರಿಕಾ ಸಚಿವರು ಬಲವಂತವಾಗಿ ಭೂಸ್ವಾಧೀನ ಮಾಡುವುದಿಲ್ಲವೆಂದು ಮಾತಿನಲ್ಲಿ ತಿಳಿಸುತ್ತಾರೆ. ವಾಸ್ತವವಾಗಿ ರೈತರ ಜೀವಂತ ಸಮಾಧಿ ಮೇಲೆ ವಸಾಹತುಗಳ ಸ್ಥಾಪನೆಗೆ ಹಾತೊರೆಯುತ್ತಿದ್ದಾರೆ ಎಂದು
ಟೀಕಿಸಿದರು.

ಭಾಷಣಗಳಲ್ಲಿ ಸಮುದಾಯದ ಓಲೈಕೆಗಾಗಿ ರೈತ ಪರ, ದಲಿತ ಪರರೆಂದು ಉದ್ಘೋಷಿಸುವ ಉಸ್ತುವಾರಿ ಸಚಿವರು, ನ್ಯಾಯಯುತ ಹಕ್ಕನ್ನು ಕೇಳಿ ಪ್ರತಿಭಟಿಸಿದರೆ ಪೊಲೀಸರ ಮೂಲಕ ದೌರ್ಜನ್ಯ ನಡೆಸಿ ದೂರು ದಾಖಲಿಸುತ್ತಿದ್ದಾರೆ. ಇನ್ನೊಂದೆಡೆ ರೈತರ ನೋವಿಗೆ ಮನ ಮಿಡಿಯುವ ಸಚಿವ ಎಂ.ಟಿ.ಬಿ. ನಾಗರಾಜ್‌ ಮಾತಿಗೆ ಸರ್ಕಾರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ರೈತರ ಚಾರಿತ್ರಿಕ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು. ಜನೋತ್ಸವದಲ್ಲಿ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ ರೈತರ ಬೆನ್ನಿಗೆ ನಿಲ್ಲಬೇಕು. ಕೃಷಿಯೂ ಒಂದು ಉದ್ಯಮವೆಂದು ಸರ್ಕಾರ ಘೋಷಿಸಬೇಕು. ಇಲ್ಲವಾದರೆ ಮುಂದಿನ ಅಧಿವೇಶನದ ಸಮಯದಲ್ಲಿ ಸಾವಿರಾರು ಸಂಖ್ಯೆಯ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತ ಹೋರಾಟಗಾರರಾದ ಮಾರೇಗೌಡ, ಅಶ್ವಥಪ್ಪ, ಕಾರಹಳ್ಳಿ ದೇವರಾಜ್, ಮುಕುಂದ್, ಪ್ರಮೋದ್, ವೆಂಕಟರಮಣಪ್ಪ, ನಂಜಪ್ಪ, ಕೃಷ್ಣಪ್ಪ, ನಾರಾಯಣಮ್ಮ ಸೇರಿದಂತೆ 13 ಗ್ರಾಮಗಳ ರೈತ ಮುಖಂಡರು, ರೈತ ಮಹಿಳೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.