ADVERTISEMENT

ದೇವನಹಳ್ಳಿ ಬಳಿ ದ್ರವ ಯೂರಿಯಾ ಘಟಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 5:10 IST
Last Updated 15 ಜುಲೈ 2022, 5:10 IST
   

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ತಾಲ್ಲೂಕಿನ ನಾಗನಾಯಕನಹಳ್ಳಿಯಲ್ಲಿರುವ ಹೈ ಟೆಕ್ ಡಿಫೆನ್ಸ್ ಅಂಡ್‌ ಏರೊ ಸ್ಪೇಸ್ ಪಾರ್ಕ್‌ನಲ್ಲಿ ದಕ್ಷಿಣ ಭಾರತದ ಮೊದಲ ಇಫ್ಕೊ ನ್ಯಾನೊ ಯೂರಿಯಾ ದ್ರವ ಗೊಬ್ಬರ ಉತ್ಪಾದನಾ ಘಟಕಕ್ಕೆ ಗುರುವಾರಭೂಮಿಪೂಜೆ ನೇರವೇರಿಸಲಾಯಿತು.

ದೇಶದಲ್ಲಿಯೇ ಆರು ಕೋಟಿ ಬಾಟಲ್‌ ನ್ಯಾನೊ ದ್ರವ ಯೂರಿಯಾ ಉತ್ಪಾದನೆ ಮಾಡಲು ಸಿದ್ಧತೆ ನಡೆಯುತ್ತಿದೆ. ಇದು 20 ಲಕ್ಷ ಟನ್‌ ಯೂರಿಯಾ ಬ್ಯಾಗ್‌ಗಳಿಗೆ ಸಮ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ಸುಖ್‌ ಮಾಂಡವಿಯಾ ಹೇಳಿದರು.

ಡ್ರೋನ್‌ ಮೂಲಕ ದ್ರವಯೂರಿಯಾ ಗೊಬ್ಬರ ಸಿಂಪಡಿಸಬಹುದಾಗಿದ್ದು, ಅದಕ್ಕಾಗಿ ಸರ್ಕಾರ ಸ್ಥಳೀಯ ಯುವಕರಿಗೆ ಡ್ರೋನ್‌ ಪೈಲೆಟ್‌ ತರಬೇತಿ ನೀಡಲಿದೆ ಎಂದರು.

ADVERTISEMENT

ಭಾರತವು ನ್ಯಾನೊ ಯೂರಿಯಾ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದು, ರೈತರಿಗೆ ಅತಿ ಕಡಿಮೆ ಬೆಲೆಗೆ ಯೂರಿಯಾ ದೊರೆಯಲಿದೆ. ನ್ಯಾನೊ ಯೂರಿಯಾ ಬಳಕೆಯಿಂದ ಮಣ್ಣಿನ ಆರೋಗ್ಯ, ಫಲವತ್ತತೆ ರಕ್ಷಣೆ ಜತೆಗೆ ಕೃಷಿ ಉತ್ಪನ್ನ ಪ್ರಮಾಣ ಹೆಚ್ಚಾಗಲಿದೆ ಎಂದು ಮಾಂಡವಿಯಾ ಅವರು ಹೇಳಿದರು.

ಅತಿಯಾದ ಕೀಟನಾಶಕ ಹಾಗೂ ರಸಗೊಬ್ಬರಗಳ ಬಳಕೆಯಿಂದ ಫಲವತ್ತಾದ ಭೂಮಿ ಸಾರಾಂಶ ಕಳೆದುಕೊಳ್ಳುತ್ತಿತ್ತು. ಆದರೆ ನ್ಯಾನೊ ಯೂರಿಯಾ ಬಳಕೆಯಿಂದ ಹಾನಿಯ ಪ್ರಮಾಣ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

‘ವಿಶ್ವ ವ್ಯಾಪಾರ ಸಂಘಟನೆ (ಡಬ್ಲೂಟಿಒ) ಕೃಷಿ ಒಪ್ಪಂದದಲ್ಲಿ ಕಾರ್ಪೊರೇಟ್‌ ಸಂಸ್ಥೆಗಳಿಗೆ ಅನುಕೂಲಕರವಾದ ರಸಗೊಬ್ಬರ ನೀತಿ ರೂಪಿಸಿತ್ತು. ಅದಕ್ಕೆ ಸಡ್ಡು ಹೊಡೆದ ಇಫ್ಕೊ ಸಂಸ್ಥೆ ನ್ಯಾನೊ ಯೂರಿಯಾವನ್ನು ಪ್ರಪಂಚಕ್ಕೆ ಪರಿಚಯಿಸಿದೆ. ಸಮುದ್ರದ ನೀರು ಬಳಸಿಕೊಂಡು ಅಮೋನಿಯಾ ಉತ್ಪಾದಿಸುವ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದೆ. ವಿಶ್ವದಲ್ಲಿ ಗಲ್ಫ್‌ ರಾಷ್ಟ್ರಗಳನ್ನು ಹೊರತು ಪಡಿಸಿದರೆ ನೀರು ಬಳಸಿಕೊಂಡು ಅಮೋನಿಯಾ ಉತ್ಪಾದಿಸಿದ ಕೀರ್ತಿ ನಮ್ಮದಾಗಲಿದೆ’ ಎಂದರು.

ಸಂಸದ ಬಿ.ಎನ್. ಬಚ್ಚೇಗೌಡ ಮಾತನಾಡಿ, ಇಫ್ಕೊ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ- ಆಪರೇಟಿವ್ ಲಿಮಿಟೆಡ್ ಕಂಪನಿಯು 1967 ರಿಂದಲೂ ರೈತರಿಗೆ ರಸಾಯನಿಕ ಗೊಬ್ಬರ ಸರಬರಾಜು ಮಾಡುತ್ತಿರುವ ವಿಶ್ವಮಾನ್ಯ ಸಂಸ್ಥೆಯಾಗಿದೆ. ಕಡಿಮೆ ದರದಲ್ಲಿ ದ್ರವರೂಪದ ಗೊಬ್ಬರ ಕೃಷಿಕರಿಗೆ ದೊರೆಯಲಿದೆ. ಇದು ದೇಶದ ರೈತರ ವರದಾನವಾಗಲಿದೆ. ನಾಗನಾಯಕಹಳ್ಳಿಯಲ್ಲಿ ಘಟಕ ಆರಂಭವಾಗುತ್ತಿರುವುದರಿಂದ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ರಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನಗಳ ರಾಜ್ಯ ಸಚಿವ ಭಗವಂತ್ ಖೂಬಾ, ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಸದಾನಂದ ಗೌಡ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ನಾರಾಯಣಸ್ವಾಮಿ, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಆರ್. ಲತಾ, ಕೆಐಯಡಿಬಿ ಅಧಿಕಾರಿ ಶಿವಶಂಕರ್, ಇಫ್ಕೊ ಅಧ್ಯಕ್ಷ ದಿಲೀಪ್ ಸಿಂಘಾನಿ, ಉಪಾಧ್ಯಕ್ಷ ಬಲ್ವೀರ್ ಸಿಂಗ್, ಎಂ.ಡಿ ಉದಯ್ ಶಂಕರ್ ಅವಸ್ಥಿ, ನಿರ್ದೇಶಕರಾದ ಕೆ.ಶ್ರೀನಿವಾಸ್ ಗೌಡ, ಎಂ.ಎನ್. ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.