ADVERTISEMENT

ಸ್ಥಳೀಯರ ಸಹಕಾರ ಅತಿಮುಖ್ಯ: ಜಿಲ್ಲಾಧಿಕಾರಿ

ಕನ್ನಮಂಗಲ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ನಡೆದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 13:51 IST
Last Updated 11 ನವೆಂಬರ್ 2018, 13:51 IST
ಗ್ರಾಮಸ್ಥರ ಸಭೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ, ಅಧಿಕಾರಿಗಳು ಇದ್ದರು
ಗ್ರಾಮಸ್ಥರ ಸಭೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ, ಅಧಿಕಾರಿಗಳು ಇದ್ದರು   

ದೇವನಹಳ್ಳಿ: ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಸಹಕಾರದ ಜತೆಗೆ ನೆರವು ಅತಿಮುಖ್ಯ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ಇಲ್ಲಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರಸ್ತುತ ಕೆರೆ ವಿಸ್ತೀರ್ಣ 94 ಎಕರೆ ಇದೆ, ಕೆರೆಯಂಗಳದ ಬಹುತೇಕ ಭಾಗ ಹೂಳು ತುಂಬಿದೆ. ಗಿಡಗಂಟಿ ಬೆಳೆದಿದೆ, ಕೆರೆ ಏರಿ ಪಕ್ಕದಲ್ಲಿ ಖಾಲಿ ಇರುವ ಸರ್ಕಾರಿ ಜಾಗದಲ್ಲಿ ವಿವಿಧ ಜಾತಿ ಸಸಿಗಳನ್ನು ಬೆಳೆಸಬೇಕು. ಅಂತರ್ಜಲ ವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

ADVERTISEMENT

ಸರ್ಕಾರದಿಂದ ಬಿಡಿಗಾಸು ನಿರೀಕ್ಷೆ ಮಾಡದೆ ಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ ನಡೆಸುವುದು ಅಷ್ಟು ಸುಲಭವಲ್ಲ. ಪ್ರಸ್ತುತ ಕೆರೆಯಲ್ಲಿನ ಹೂಳು ಹೊರಹಾಕಲು ಕನಿಷ್ಠ ₹ 4 ರಿಂದ 5 ಕೋಟಿ ಬೇಕು. ವಿವಿಧ ಶುಭ ಕಾರ್ಯಗಳಿಗೆ ವ್ಯರ್ಥವಾಗಿ ಲಕ್ಷಾಂತರ ವೆಚ್ಚ, ದೇವಸ್ಥಾನಗಳಿಗೂ ದಾನ ಧರ್ಮ ಮಾಡುವ ಅನೇಕರು ಸಮಾಜದಲ್ಲಿದ್ದಾರೆ. ಇದು ಸಾರ್ವಜನಿಕರ ಸೇವೆ ಎಂದು ಮುಂದೆ ಬಂದು ಕೆಲಸ ಮಾಡಲಿ ಎಂದು ತಿಳಿಸಿದರು.

ಪ್ರಸ್ತುತ ದೇವನಹಳ್ಳಿ ವೇಣುಗೋಪಾಲ ಸ್ವಾಮಿ ಚಿಕ್ಕಸಿಹಿ ನೀರಿನ ಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ 15 ದಿನಗಳಿಂದ ನಡೆಯುತ್ತಿದೆ. ಕಾರಹಳ್ಳಿ ಅಮಾನಿ ಕೆರೆ ಹೂಳು ತೆಗೆಯುವ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾದಹಳ್ಳಿ ಮತ್ತು ಕೆಂಪಲಿಗನಪುರ ಕೆರೆಗಳಲ್ಲಿ ಹೂಳು ಎತ್ತಲು ಸಹಕರಿಸುವುದಾಗಿ ಗ್ರಾಮಸ್ಥರು ಹೇಳಿದ್ದು ಪೂರ್ವಭಾವಿ ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದರು.

ಒಂದು ಬಾರಿ ಕಾಮಗಾರಿ ಆರಂಭಗೊಂಡರೆ ಸ್ಥಗಿತಗೊಳ್ಳಬಾರದು, ಸಂಪೂರ್ಣ ಮುಗಿಯಬೇಕು ಎಂದರು. ‘ಅನೇಕ ದಾನಿಗಳಿದ್ದೀರಾ ಪೀಳಿಗೆಗೆ ಅಂತರ್ಜಲ ಉಳಿಸಲು ಸಹಕರಿಸಿ’ ಎಂದರು.

ತಹಶೀಲ್ದಾರ್ ಎಂ. ರಾಜಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಿಕಾಂತ್, ಚನ್ನಕೇಶವ, ಮೂರ್ತಿ, ಸೋಮಶೇಖರ್, ಜಯಮ್ಮ, ರೂಪ, ನರೇಂದ್ರ ಬಾಬು, ಮಹಾಲಿಂಗಪ್ಪ, ನಜೀರ್ ಅಹಮದ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.