
ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಕೆರೆಗೆ ಬಿದ್ದಿದ್ದ ಲಾರಿಯನ್ನು ಕ್ರೈನ್ ಮೂಲಕ ಹೊರ ತೆಗೆಯಲಾಯಿತು
ಆನೇಕಲ್: ತಾಲ್ಲೂಕಿನ ಬಿದರಗುಪ್ಪೆ ಕೆರೆಗೆ ಆಯ ತಪ್ಪಿ ಲಾರಿಯೊಂದು ಉರುಳು ಬಿದ್ದು ಅದರ ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕಲಬುರಗಿಯ ಮಹೇಶ್(37) ಮೃತ ಚಾಲಕ.
ಕಲಬುರಗಿಯ ಮಹೇಶ್ ತಾಲ್ಲೂಕಿನ ಬಿಲ್ಲಾಪುರ ಗೇಟ್‌ನಲ್ಲಿ ವಾಸವಿದ್ದರು. ಲಾರಿ ಚಾಲಕನಾಗಿದ್ದ ಮಹೇಶ್ ಹೊಸೂರಿನಿಂದ ವೈಟ್‌ಫೀಲ್ಡ್‌ಗೆ ಮಣ್ಣು ಸಾಗಿಸುವಾಗ ಅಪಘಾತ ನಡೆದಿದೆ. ಬಿದರಗುಪ್ಪೆ ಕೆರೆ ಏರಿಯ ಮೇಲೆ ಸಂಚರಿಸುವ ವೇಳೆ ಆಯ ತಪ್ಪಿ ಲಾರಿ ಕೆರೆಗೆ ಉರುಳಿದೆ. ಲಾರಿ ನೀರಲ್ಲಿ ಮುಳಗಿದ್ದರಿಂದ ಚಾಲಕ ಹೊರ ಬರಲಾರದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದೆ. ಸೋಮವಾರ ಮಧ್ಯಾರಾತ್ರಿ ಘಟನೆ ನಡೆದಿದ್ದು, ಮಂಗಳವಾರ ಕೆರೆಯಿಂದ ಶವ ಮತ್ತು ಲಾರಿಯನ್ನು ಹೊರ ತೆಗೆಯಲಾಯಿತು.
ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಸುಮಾರು ಐದು ತಾಸು ಕಾರ್ಯಾಚರಣೆ ನಡೆಸಿ ಕ್ರೇನ್‌ನ ಮೂಲಕ ಲಾರಿಯನ್ನು ಮೇಲೆತ್ತಿದ್ದಾರೆ. ಲಾರಿಯಲ್ಲಿ ಚಾಲಕ ಮಹೇಶ್ ಅವರ ಮೃತ ದೇಹ ದೊರೆತಿದೆ. ಶವವನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಯಿತು.
ಕಾರ್ಯಾಚರಣೆಯಿಂದ ಮಧ್ಯಾಹ್ನ 12ರವರೆಗೂ ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಡಿವೈಎಸ್ಪಿ ಮೋಹನ್ ಕುಮಾರ್, ಅತ್ತಿಬೆಲೆ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಸ್ಥಳದಲ್ಲಿದ್ದರು.
ಲಾರಿಯಿಂದ ಶವ ಹೊರ ತೆಗೆಯುತ್ತಿದ್ದಂತೆ ಮಹೇಶ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಳೆದ ವರ್ಷ ಬಸ್ ಉರುಳಿ ಬಿದ್ದಿತ್ತು
2024ರಲ್ಲಿ ಓಂ ಶಕ್ತಿ ಮಾಲಾಧಾರಿಗಳು ತೆರಳುತ್ತಿದ್ದ ಬಸ್ ಇದೇ ಕೆರೆಗೆ ಉರುಳಿ ಬಿದ್ದು 18 ಮಾಲಾಧಾರಿಗಳು ಗಾಯಗೊಂಡಿದ್ದರು. ಕೆರೆಯ ಏರಿಯ ಮೇಲೆ ರಸ್ತೆ ಕಿರದಾಗಿದೆ. ಗುಂಡಿಗಳು ಹೆಚ್ಚಾಗಿವೆ. ಕೆರೆಯ ಏರಿಯ ಮೇಲೆ ಯಾವುದೇ ಸುರಕ್ಷಿತ ತಡೆಗೋಡೆಗಳಿಲ್ಲ. ಇದರಿಂದ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಅತ್ತಿಬೆಲೆ-ಸರ್ಜಾಪುರ-ವಿಮಾನ ನಿಲ್ದಾಣ ರಸ್ತೆ ಕಾಮಗಾರಿ ನಡೆಯುತ್ತಿದ್ದು ಬಿದರಗುಪ್ಪೆ ಕೆರೆಯ ಏರಿಯ ಮೇಲೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆಗೆ ತಡೆಗೋಡೆ ನಿರ್ಮಿಸಬೇಕು ಕೆರೆಯ ಏರಿಯ ಮೇಲೆ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆಯಿದೆ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.