ADVERTISEMENT

ಹೊಲದಲ್ಲೇ ಕೊಳೆತ ರಾಗಿ ಬೆಳೆ

ಅಕಾಲಿಕ ಮಳೆ ತಂದ ಆತಂಕ l ಜಿಲ್ಲೆಯ ರೈತರು ಕಂಗಾಲು l ಪರಿಹಾರಕ್ಕೆ ಆಗ್ರಹ

ವಡ್ಡನಹಳ್ಳಿ ಬೊಜ್ಯನಾಯ್ಕ
Published 10 ಡಿಸೆಂಬರ್ 2020, 5:48 IST
Last Updated 10 ಡಿಸೆಂಬರ್ 2020, 5:48 IST
ನೆಲಕ್ಕೆ ಉದುರುತ್ತಿರುವ ರಾಗಿ ಫಸಲು
ನೆಲಕ್ಕೆ ಉದುರುತ್ತಿರುವ ರಾಗಿ ಫಸಲು   

ದೇವನಹಳ್ಳಿ: ಅಕಾಲಿಕ ಮಳೆಯ ಪರಿಣಾಮ ಗ್ರಾಮಾಂತರ ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ರಾಗಿ ಕಟಾವಾಗದೆ ನೆಲಕ್ಕೆ ಒರಗಿ ಮೊಳಕೆಯಾಗುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ರಾಗಿ ಬಯಲುಸೀಮೆಯ ಪ್ರಮುಖ ಆಹಾರದ ಬೆಳೆ. ಈ ಬಾರಿ ಉತ್ತಮ ಮುಂಗಾರು ಮಳೆಯ ಆರಂಭದಿಂದಾಗಿ ರೈತರಲ್ಲಿ ನವಚೈತನ್ಯಕ್ಕೆ ಕಾರಣವಾಗಿತ್ತು. ಅದೇ ರೀತಿ ನಿರೀಕ್ಷೆಗೂ ಮೀರಿ ಫಸಲು ಕಂಡಿತ್ತು.

ಕೊಯ್ಲಿನ ಸಂದರ್ಭದಲ್ಲಿಯೇ ಅಕಾಲಿಕ ಮಳೆಯ ಜೊತೆಗೆ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಬಿತ್ತನೆಯಾಗಿರುವ ಶೇಕಡ 50ರಷ್ಟು ಪ್ರದೇಶದಲ್ಲಿ ರಾಗಿ ತೆನೆ ಉದುರಿ ಮಣ್ಣಿಗೆ ಸೇರುತ್ತಿದೆ. ಮತ್ತೊಂದೆಡೆ ತೆನೆ ಕಪ್ಪುಬಣ್ಣಕ್ಕೆ ತಿರುಗಿ ರಾಗಿಕಾಳು ಮೊಳಕೆಯಾಗುತ್ತಿದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ ಎಂಬುದು ರೈತರ ಅಳಲು.

ADVERTISEMENT

ಕಳೆದ 20 ದಿನಗಳಿಂದ ಎಡಬಿಡದೆ ಹಗಲು–ರಾತ್ರಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಜಡಿಮಳೆಯಿಂದಾಗಿ ರಾಗಿ ಬೆಳೆದ ರೈತರು ಕಂಗಾಲಾಗಿದ್ದಾರೆ. ರಾಗಿ ತೆನೆಯು ರಭಸವಾಗಿ ಬೀಸುತ್ತಿರುವ ತಂಪುಗಾಳಿಗೆ ನೆಲಕಚ್ಚಿದೆ. ಈಗಾಗಲೇ ಜಿಲ್ಲೆಯಲ್ಲಿ 20ರಷ್ಟು ಕೊಯ್ಲು ಮಾಡಿರುವ ರಾಗಿಹುಲ್ಲಿನ ಮೆದೆಗಳು ಬಿಸಿಲಿನ ತಾಪ ಕಾಣದೆ ಜಮೀನಿನಲ್ಲಿ ಕೊಳೆಯುತ್ತಿವೆ. ಫಸಲು ತುಂಬಿರುವ ರಾಗಿ ತೆನೆಯ ಸಮೇತ ಹುಲ್ಲುಸಹ ಸಿಗುವುದಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೃಷಿ ಇಲಾಖೆಯ ಮಾಹಿತಿಯಂತೆ ಗ್ರಾಮಾಂತರ ಜಿಲ್ಲೆಯ ವಾರ್ಷಿಕ ಬಿತ್ತನೆ ಗುರಿ 41,326 ಹೆಕ್ಟೇರ್. ಈ ಬಾರಿ ಶೇಕಡ 100ರಷ್ಟು ಬಿತ್ತನೆಯಾಗಿದೆ. ಈ ಪ್ರಮಾಣದ ಬಿತ್ತನೆ, ಅದಕ್ಕೆ ತಕ್ಕಂತೆ ಫಸಲು ಕಟ್ಟಿದ ರೀತಿಯಿಂದ ಮುಂದಿನ ಮೂರು ವರ್ಷ ಬರಗಾಲ ಬಂದರೂ ಸುಧಾರಿಸಿಕೊಳ್ಳುವ ಧೈರ್ಯ ರೈತರಿಗೆ ಇರುತ್ತಿತ್ತು. ಆದರೆ, ಇಂತಹ ಜಡಿಮಳೆಯು ಕಳೆದ ಹತ್ತು ವರ್ಷಗಳಿಂದಲೂ ಸುರಿದಿರಲಿಲ್ಲ ಎನ್ನುತ್ತಾರೆ ನೊಂದ ರೈತರು.

‘ಜಡಿಮಳೆಯಿಂದ ನಲುಗುತ್ತಿರುವ ರೈತರ ರಾಗಿ ಫಸಲಿನ ಕಡೆಗೆ ಕೃಷಿ ಇಲಾಖೆಯ ಅಧಿಕಾರಿಗಳ ಸುಳಿವಿಲ್ಲ. ನಿರಂತರವಾಗಿ ರೈತರಿಗೆ ಮಾರ್ಗದರ್ಶನ ನೀಡಬೇಕಾದ ಅಧಿಕಾರಿಗಳಿಗೆ ಬೆಳೆಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ರೈತರನ್ನು ನಿರ್ಲಕ್ಷಿಸಿದ್ದಾರೆ. ಮುಂಗಾರಿನಲ್ಲಿ ಫಸಲ್ ಭೀಮಾ ಯೋಜನೆಯಡಿ ವಿಮಾ ಕಂತು ಪಾವತಿಸಿದ್ದು ರೈತರ ಬೆಳೆ ನಷ್ಟದ ಬಗ್ಗೆ ಸೂಕ್ತ ಪರಿಹಾರ ನೀಡಲು ಕ್ರಮವಹಿಸಬೇಕು’ ಎಂಬುದು ರೈತ ಕೊಯಿರಾ ಗ್ರಾಮದ ಚಿಕ್ಕೆಗೌಡ ಅವರ ಒತ್ತಾಯ.

‘ಹುಲ್ಲು ಕೊಳೆತರೆ ಪಶುಗಳಿಗೆ ನೀಡಲು ಸಾಧ್ಯವಿಲ್ಲ. ರಾಗಿ ಮೊಳಕೆಯಾಗುತ್ತಿದೆ. ಇದರ ಕಾಳು ಆರೋಗ್ಯಕ್ಕೆ ಉತ್ತಮ ಆಹಾರವಾಗುವುದಿಲ್ಲ. ಕೃಷಿ ಇಲಾಖೆಯು ಗ್ರಾಮಾಂತರ ಜಿಲ್ಲೆಯಲ್ಲಿ ಹಾಲಿ ವಿಸ್ತೀರ್ಣದಲ್ಲಿರುವ ರಾಗಿ ಫಸಲಿನ ಬಗ್ಗೆ ತ್ವರಿತವಾಗಿ ಬೆಳೆ ಸಮೀಕ್ಷೆ ನಡೆಸಿ ನಷ್ಟದ ಪರಿಹಾರ ನೀಡಲು ಮುಂದಾಗಬೇಕು’ ಎಂದು ಒತ್ತಾಯಿಸುತ್ತಾರೆ ಪ್ರಾಂತ ರೈತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ವೀರಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.