ಹೊಸಕೋಟೆ: ನಗರದ ಹೊರವಲಯದಲ್ಲಿರುವ ಜನಪದರು ರಂಗ ವೇದಿಕೆಯಲ್ಲಿ 96ನೇ ರಂಗಮಾಲೆ ಅಂಗವಾಗಿ ಬೆಂಗಳೂರಿನ ಥೇಮಾ ಥಿಯಟರ್ ವತಿಯಿಂದ ‘ಎಲ್‌ಎಸ್‌ಡಿ’ ನಾಟಕ ಪ್ರದರ್ಶನ ನಡೆಯಿತು.
ಎಸ್.ವಿ.ಕಶ್ಯಪ್ ಅವರು ರಚಿಸಿ, ಎಸ್.ವಿ.ಸುಷ್ಮಾ ಅವರು ನಿರ್ದೇಶನ ಮಾಡಿರುವ ಮೂರೇ ಮಹಿಳಾ ಕಲಾವಿದರು ಅಭಿನಯಿಸಿದ ವಿಭಿನ್ನ ಪ್ರಯೋಗದ ‘ಎಲ್‌ಎಸ್‌ಡಿ’ ಪ್ರೇಕ್ಷಕರಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿತು. ಪ್ರೇಕ್ಷಕರನ್ನು ನಗಿಸುತ್ತಲೇ ನೋವಿನ, ವಿಷಾದದ ಛಾಯೆಯು ಚಿಂತನೆಗೆ ನಾಟಕ ಸದ್ದಿಲ್ಲದೆ ಸಾಗುವಂತೆ ಮಾಡಿತ್ತು.
ಜಾಗತೀಕರಣದಿಂದ ಆದ ಆರ್ಥಿಕ ಪ್ರಗತಿ ಸಮಾಜದ ಒಂದು ವರ್ಗದವರನ್ನು ಸ್ಥಿತಿವಂತರಾಗಿಸುವ ನಡುವೆ ಕಸ ಮುಸರೆ ತೊಳೆಯುವ, ಮನೆ ಕೆಲಸ ಮಾಡುವ, ಬಡ ಹೆಣ್ಣು ಮಕ್ಕಳ ಆಸೆ ಆಕಾಂಕ್ಷೆಗಳು ಕನಸು ಕನವರಿಕೆ ಇರುವುದನ್ನು ಇದ್ದಂತೆಯೆ ಪ್ರದರ್ಶಿಸಿ ಪ್ರೇಕ್ಷಕರ ಮನ ತಟ್ಟಿತು.
‘ಎಲ್‌ಎಸ್‌ಡಿ’ ಅಂದರೆ ಲಕ್ಷ್ಮಿ, ಸರಸ್ವತಿ ಮತ್ತು ದುರ್ಗಿ ಎಂಬ ಮೂವರು ಮನೆ ಕೆಲಸದ ಮಹಿಳೆಯರ ಕತೆ. ಈ ಪಾತ್ರಗಳಿಗೆ ಸ್ನೇಹಾ ಕಪ್ಪಣ್ಣ ಮತ್ತು ಸುನೇತ್ರಾ ಪಂಡಿತ್ ಜೀವ ತುಂಬಿದ್ದರು. ಸುಷ್ಮಾ ಅವರು ನಾಟಕದ ವಿನ್ಯಾಸ ಮಾಡಿ ನಿರ್ದೇಶಿಸಿದ್ದರು.
ಜನಪದರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕಾಟಂ ನಲ್ಲೂರು ಪಾಪಣ್ಣ ನಿರ್ದೇಶಕರನ್ನು ಮತ್ತು ಕಲಾವಿದರನ್ನು ಸನ್ಮಾನಿಸಿದರು.
ಜನಪದರು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಸಿದ್ಧೇಶ್ವರ ನನಸುಮನೆ, ಎಂ.ಸುರೇಶ್, ವೇಂಕಟಾಚಲಪತಿ, ಮುನಿರಾಜು ಬಿದರೇಅಗ್ರಹಾರ, ತಾವರೇಕೆರೆ ಶಿವಕುಮಾರ್, ಬಸವರಾಜು, ಬಾಗೇಪಲ್ಲಿ ಕೃಷ್ಣಮೂರ್ತಿ, ಕೃಷ್ಣ ಸುರೇಶ, ರಾಜಣ್ಣ, ಜಿ.ಬಿ.ಚಂದ್ರಶೇಖರ್, ರಾಜಣ್ಣ, ಮಧುಸೂದನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.