ADVERTISEMENT

ನಿವೇಶನ ಹಂಚಿಕೆ | ಮಾದಿಗ ಸಮುದಾಯಕ್ಕೆ ಆದ್ಯತೆ ನೀಡಿ: ಶಿವಾನಂದ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:16 IST
Last Updated 27 ಸೆಪ್ಟೆಂಬರ್ 2025, 5:16 IST
ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿ ವಿಜಯಪುರ ಹೋಬಳಿಯ ಕೋರಮಂಗಲ ಗ್ರಾಮಪಂಚಾಯಿತಿ ಎದುರು ದಲಿತ ಸಮುದಾಯದ ಮುಖಂಡರು ಪ್ರತಿಭಟಿಸಿದರು
ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿ ವಿಜಯಪುರ ಹೋಬಳಿಯ ಕೋರಮಂಗಲ ಗ್ರಾಮಪಂಚಾಯಿತಿ ಎದುರು ದಲಿತ ಸಮುದಾಯದ ಮುಖಂಡರು ಪ್ರತಿಭಟಿಸಿದರು   

ವಿಜಯಪುರ (ದೇವನಹಳ್ಳಿ): ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಹೋಬಳಿಯ ಕೋರಮಂಗಲ ಗ್ರಾಮಪಂಚಾಯಿತಿ ಎದುರು ದಲಿತ ಸಮುದಾಯದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೋರಮಂಗಲ ಗ್ರಾಮದಲ್ಲಿ 100ಕ್ಕೂ ಹೆಚ್ಚು ದಲಿತ ಸಮುದಾಯದ ಕುಟುಂಬಗಳಿವೆ. ಒಂದೇ ಮನೆಯಲ್ಲಿ ಐದಾರು ಕುಟುಂಬಗಳು ವಾಸ ಮಾಡುತ್ತಿದೆ. ಸಮುದಾಯದ ಜನರು ಅನಕ್ಷರಸ್ಥರಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಹೀಗಾಗಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ನಿವೇಶನ ಹಂಚಿಕೆ ಮಾಡಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.

ಗ್ರಾಮದ ಸರ್ವೆ ನಂ 218 ರಲ್ಲಿ 8 ಎಕರೆ ಜಮೀನಿನಲ್ಲಿ ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಒಟ್ಟು 218 ನಿವೇಶನಗಳು ಮಂಜೂರಾಗಿದ್ದು, ಜನಸಂಖ್ಯೆಯ ಆಧಾರದ ಮೇಲೆ ಸರ್ಕಾರ ನಿವೇಶನ ಹಂಚಿಕೆ ಮಾಡಬೇಕು ಎಂದು ಕೋರಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಾನಂದ್ ಒತ್ತಾಯಿಸಿದರು.

ADVERTISEMENT

ಈಗಾಗಲೇ ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಮಾದಿಗ ಸಮುದಾಯವನ್ನು ಕಡೆಗಣಿಸಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದಲ್ಲಿ ಅನೇಕ ಕುಟುಂಬಗಳು ನಿವೇಶನಗಳಿಲ್ಲದೇ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದಾರೆ. ಮತ್ತೊಮ್ಮೆ ಆಯ್ಕೆ ಪಟ್ಟಿಯನ್ನು ಪರಿಶೀಲಿಸಿ ಹೆಚ್ಚಿನ ನಿವೇಶನಗಳನ್ನು ಮಾದಿಗ ಸಮುದಾಯಕ್ಕೆ ನೀಡಬೇಕೆಂದು ಮನವಿ ಮಾಡಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಕೋರಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ್, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 100 ನಿವೇಶನ, ಅಂಗವಿಕಲರಿಗೆ ಮತ್ತು ಸಾಮಾನ್ಯ ವರ್ಗಕ್ಕೆ ಉಳಿದ ನಿವೇಶನ ಹಂಚಲು ಆಯ್ಕೆ ಮಾಡಲಾಗಿದೆ. ಈಗ ದಲಿತ ಸಮುದಾಯಕ್ಕೆ ಹೆಚ್ಚಿನ ನಿವೇಶನ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್, ದೇವರಾಜ್, ಎಂ.ವೆಂಕಟೇಶ್, ನರಸಿಂಹಮೂರ್ತಿ, ವಕೀಲ ಕೃಷ್ಣಮೂರ್ತಿ, ಕೆ.ಎಂ.ವಿಜಯ್, ಅನಂತಕುಮಾರ್, ರಮಾದೇವಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.