ADVERTISEMENT

ಹಿರಿಯರ ಸಮಾಧಿಗಳಿಗೆ ಪೂಜೆ

ವಿಜಯಪುರ: ಮಹಾಲಯ ಅಮಾವಾಸ್ಯೆ, ಪಿತೃಗಳ ಸ್ಮರಣೆ, ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:10 IST
Last Updated 18 ಸೆಪ್ಟೆಂಬರ್ 2020, 6:10 IST
ವಿಜಯಪುರದ ಬಸವಕಲ್ಯಾಣಮಠದ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಮಹಾಲಯ ಅಮಾವಾಸ್ಯೆಯ ಅಂಗವಾಗಿ ಜನರು ಪಿತೃಗಳ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು
ವಿಜಯಪುರದ ಬಸವಕಲ್ಯಾಣಮಠದ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಮಹಾಲಯ ಅಮಾವಾಸ್ಯೆಯ ಅಂಗವಾಗಿ ಜನರು ಪಿತೃಗಳ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು   

ವಿಜಯಪುರ: ಮಹಾಲಯ ಅಮಾವಾಸ್ಯೆಯ ಅಂಗವಾಗಿ ಹೋಬಳಿಯಾದ್ಯಂತ ಜನರು ಪಿತೃಗಳ ಸಮಾಧಿಗಳ ಬಳಿಗೆ ತೆರಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ನಗರ ಮತ್ತು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಗಳಿಗೆ ಕುಟುಂಬ ಸದಸ್ಯರ ಸಮೇತ ತೆರಳಿದ ಜನರು, ಪೂರ್ವಜರು ಕುಟುಂಬದ ಹಿರಿಯರ ಸಮಾಧಿಗಳನ್ನು ಪೂಜಿಸಿ, ತರ್ಪಣ, ಶ್ರಾದ್ಧಕ್ರಿಯೆಗಳ ಮೂಲಕ ಅವರನ್ನು ಸ್ಮರಿಸಿ, ಕೃತಜ್ಞತೆ ಸಮರ್ಪಿಸಿದರು.

ಅಮಾವಾಸ್ಯೆ ಅಂಗವಾಗಿ ಜನರು ಮನೆಯಲ್ಲಿ ಅಗಲಿದ ಹಿರಿಯರ ಸ್ಮರಣೆಯಲ್ಲಿ ಅವರು ಇಷ್ಟಪಡುವ ತಿಂಡಿ ತಿನಿಸು ಸಿದ್ಧಪಡಿಸಿ, ತೊಡುತ್ತಿದ್ದ ಬಟ್ಟೆಬರೆ ಶುಚಿಗೊಳಿಸಿ, ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಹಿರಿಯರಿಗೆ ಅರ್ಪಿಸಿದ ಎಡೆ ಮನೆಯ ಮಹಡಿ ಮೇಲೆ ಇಟ್ಟು. ಅದನ್ನು ಕಾಗೆ ತಿಂದ ಬಳಿಕ ಪ್ರಸಾದದ ರೂಪದಲ್ಲಿ ಊಟ ಸೇವಿಸಿದರು.

ADVERTISEMENT

ಹಿರಿಯ ಮುಖಂಡ ರಾಮಕೃಷ್ಣಪ್ಪ ಮಾತನಾಡಿ, ‘ಪಿತೃ ಪಕ್ಷದ ಕೊನೆಯ ದಿನವನ್ನು ಮಹಾಲಯ ಅಮಾವಾಸ್ಯೆಯ ದಿನವನ್ನು ಧರ್ಮಗ್ರಂಥಗಳಲ್ಲಿ ಬಹಳ ಶ್ರೇಷ್ಠ ದಿನವೆಂದು ಹೇಳಲಾಗಿದೆ. ಪಿತೃಗಳ ಮರಣದ ದಿನಾಂಕ ತಿಳಿಯದಿದ್ದಲ್ಲಿ ಈ ದಿನದಂದು ಅವರ ಶ್ರಾದ್ಧ ಮಾಡುತ್ತಾರೆ. ಎಂದು ಹಿರಿಯರು ಹೇಳುತ್ತಾರೆ. ಈ ದಿನದಂದು ಮನೆಯಲ್ಲಾಗಲಿ ಅಥವಾ ಮನೆಯ ಹೊರಗಾಗಲಿ ಮಾಂಸಾಹಾರ ಮತ್ತು ಮದ್ಯ ಸೇವಿಸಬಾರದು. ಈ ದಿನ ಇವುಗಳ ಸೇವನೆಯಿಂದ ಪೂರ್ವಜರ ಆತ್ಮಕ್ಕೆ ನೋವುಂಟಾಗುತ್ತದೆ ಎಂದು ಹೇಳುತ್ತಾರೆ’ ಎಂದರು.

ಬೆಳಿಗ್ಗೆಯಿಂದಲೇ ಅವರವರ ಪೂರ್ವಜರ ಸಮಾಧಿಗಳ ಬಳಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ ಜನರು, ಸಮಾಧಿಗಳಿಗೆ ಬಣ್ಣಗಳನ್ನು ಬಳಿದು, ಹೂಗಳಿಂದ ಸಿಂಗಾರ ಮಾಡಿ, ಪೂರ್ವಜರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಸಮಾಧಿಗಳ ಮುಂದೆ ಇಟ್ಟು ಪೂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.