ADVERTISEMENT

ಕೋವಿಡ್‌ ಅಪಮಾನಕ್ಕೆ ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 16:31 IST
Last Updated 21 ಜುಲೈ 2020, 16:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ದೊಡ್ಡಬಳ್ಳಾಪುರ: ಮಗನಿಗೆ ಕೋವಿಡ್‌-19 ದೃಢಪಟ್ಟು ಆಸ್ಪತ್ರೆಯಲ್ಲಿದ್ದರೂ ಸಹ ಅಕ್ಕಪಕ್ಕದವರು ನಿಂದಿಸಿದ್ದರಿಂದ ಮನನೊಂದು ನಗರದ ಖಾಸ್‌ಭಾಗ್‌ ನಿವಾಸಿ ನಾಗರಾಜ್‌(52) ಮಂಗಳವಾರ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.

ಮೃತರ ಮಗಳು ಎಚ್‌.ಎನ್‌.ಆಶಾ ನಗರ ಪೊಲೀಸ್ ಠಾಣೆಗೆ ನೀಡುವ ದೂರಿನಲ್ಲಿ, ಖಾಸ್‌ಬಾಗ್‌ ವಾರ್ಡ್‌ನ ಮುಖಂಡರಾದ ಮುದ್ದಪ್ಪ, ಹನುಮಂತರಾಯಪ್ಪ ಅವರು ನಮ್ಮ ತಂದೆಯ ಮೊಬೈಲ್‌ಗೆ ಕರೆ ಮಾಡಿ ಇಲ್ಲಿಂದ ಮನೆ ಖಾಲಿ ಮಾಡಿಕೊಂಡು ಹೋಗಬೇಕು. ನೀವುಗಳು ಇಲ್ಲಿಯೇ ಇದ್ದರೆ ಇತರರಿಗೂ ಕೊರೊನಾ ಸೋಂಕು ಹರಡುತ್ತದೆ ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮ ತಂದೆಗೆ ಕೊರೊನಾ ಸೋಂಕು ಇರಲಿಲ್ಲ. ಆದರೆ ನಮ್ಮ ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಆತನಿಗೆ ಕೋವಿಡ್‌-19 ದೃಢಪಟ್ಟಿತ್ತು. ಇದನ್ನೇ ನೆಪ ಮಾಡಿಕೊಂಡು ನಿಂದಿಸಿ ಮನೆ ಖಾಲಿಮಾಡಿಕೊಂಡು ಇಲ್ಲಿಂದ ಬೇರೆ ಕಡೆಗೆ ಹೋಗುವಂತೆ ಒತ್ತಡ ಹೇರಿದ್ದರಿಂದ ಮಾನಸಿಕವಾಗಿ ನೊಂದಿದ್ದರು. ಸೋಮವಾರ ಮನೆಯಿಂದ ಹೊರ ಹೋದವರು ಹೆಸರಘಟ್ಟ ಸಮೀಪದ ಕೆರೆ ಸಮೀಪ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ನಮ್ಮ ತಂದೆಯವರು ನನಗೆ ಕರೆ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ. ನಮ್ಮ ತಂದೆಯವರೊಂದಿಗೆ ನಡೆದಿರುವ ಸಂಭಾಷಣೆಯ ಧ್ವನಿ ಮುದ್ರಣವು ಸಹ ಇದೆ. ಹೀಗಾಗಿ ಹನುಮಂತರಾಯಪ್ಪ, ಮುದ್ದಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.