ADVERTISEMENT

ವಿಜಯಪುರ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 12:40 IST
Last Updated 9 ಜನವರಿ 2020, 12:40 IST
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸುವಂತೆ ಪೋಷಕರ ಮನವೊಲಿಸುವಲ್ಲಿ ನಿರತರಾಗಿರುವ ಶಿಕ್ಷಕರು
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸುವಂತೆ ಪೋಷಕರ ಮನವೊಲಿಸುವಲ್ಲಿ ನಿರತರಾಗಿರುವ ಶಿಕ್ಷಕರು   

ವಿಜಯಪುರ: 14 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ ಅವರನ್ನು ಕೂಡಲೇ ಶಾಲೆಗೆ ದಾಖಲು ಮಾಡಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿ ಎಂದು ಶಿಕ್ಷಕರು ಶಾಲೆಬಿಟ್ಟ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪೋಷಕರನ್ನು ಮನವೊಲಿಸಿದರು.

ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಮಾಡಿದ ಮುಖ್ಯಶಿಕ್ಷಕ ರಮೇಶ್ ಮಾತನಾಡಿ, ಪ್ರತಿಯೊಂದು ಮಗುವಿಗೂ ಉಚಿತ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಕೊಡುತ್ತಿದೆ. ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ಸಮವಸ್ತ್ರ, ಪೌಷ್ಟಿಕವಾದ ಬಿಸಿಯೂಟ, ಸೈಕಲ್, ಸೇರಿದಂತೆ ಅನೇಕ ಸೌಲಭ್ಯಗಳನ್ನು ಕೊಡುತ್ತಿದೆ ಎಂದರು.

ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರತಿಭಾ ಕಾರಂಜಿ, ವಿಜ್ಞಾನ ಮೇಳದಂತಹ ಕಾರ್ಯಕ್ರಮಗಳು ನಡೆಯುತ್ತವೆ. 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಅಪರಾಧ. ದುಡಿಮೆ ಮಾಡುವ ಮಕ್ಕಳ ಪೋಷಕರ ಮೇಲೆಯೂ ಕಾನೂನು ಕ್ರಮ ಜರುಗಿಸಲು ಅವಕಾಶವಿರುವ ಕಾರಣ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದರು.

ADVERTISEMENT

ಶಿಕ್ಷಕ ಮುನಿರಾಜು ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯೇ ಈ ದೇಶದ ಪ್ರಗತಿಯಾಗಿದೆ. ಇಂಗ್ಲಿಷ್‌ ಭಾಷೆ ವ್ಯಾಮೋಹದಿಂದಾಗಿ ದುಬಾರಿ ಹಣ ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿಸುವ ಬದಲಾಗಿ ಸರ್ಕಾರಿ ಶಾಲೆಗೆ ದಾಖಲು ಮಾಡಿ ಎಂದು ಮನವಿ ಮಾಡಿದರು.

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ನಾವು ನೀಡುತ್ತೇವೆ. ಭವಿಷ್ಯದಲ್ಲಿ ಅವರು ಜೀವನ ನಿರ್ವಹಣೆ ಮಾಡುವಂತಹ ಉತ್ತಮ ವ್ಯವಹಾರಿಕ ಜ್ಞಾನವನ್ನು ಕಲಿಸುತ್ತೇವೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ತಿಳಿಸಿದರು.

ಪೋಷಕರೂ ಸಕಾರಾತ್ಮಕವಾಗಿ ಸ್ಪಂದಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.