ADVERTISEMENT

ಸಂಭ್ರಮ ಸಡಗರದ ಮೌಕ್ತಿಕಾಂಬ ಕರಗ

ವಹ್ನಿಕುಲ ತಿಗಳ ಸಮುದಾಯದವರ ಶಕ್ತಿ ದೇವತೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:05 IST
Last Updated 19 ಮೇ 2019, 14:05 IST
ನಗರದಲ್ಲಿ ನಡೆದ ಕರಗ ಮಹೋತ್ಸವ
ನಗರದಲ್ಲಿ ನಡೆದ ಕರಗ ಮಹೋತ್ಸವ   

ದೇವನಹಳ್ಳಿ: ಶ್ರೀಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವ ಶ್ರದ್ಧಾಭಕ್ತಿ, ಸಂಭ್ರಮ, ಸಡಗರದಿಂದ ನೆರವೇರಿತು.

ವಹ್ನಿಕುಲ ತಿಗಳ ಸಮುದಾಯದವರ ಶಕ್ತಿ ದೇವತೆ ಎಂದು ನಂಬಿ ಅರಾಧಿಸುವ ಶ್ರೀ ಮೌಕ್ತಿಕಾಂಭ ಅಮ್ಮನವರ ಕರಗವು ಸರ್ವದೇವತೆಗಳ ಶಕ್ತಿ ಕೇಂದ್ರ ಎಂಬುದು ಪಾರಂಪರಿಕ ನಂಬಿಕೆ. ಶಿರಭಾಗದಲ್ಲಿ ವಿಷ್ಣು, ಕಂಠಭಾಗದಲ್ಲಿ ಈಶ್ವರ, ಅಧೋಭಾಗದಲ್ಲಿ ಸೃಷ್ಟಿಕರ್ತ ಬ್ರಹ್ಮ, ಮಧ್ಯಭಾಗದಲ್ಲಿ ಸಮಸ್ತ ಮಾತೃಗಣಗಳು ವಾಸಿಸುತ್ತವೆ. ಇವೆಲ್ಲವನ್ನು ಧರಿಸಿ ಮಹಾ ಶಕ್ತಿಯಾಗಿರುವ ಮೌಕ್ತಿಕಾಂಭ ಅಮ್ಮ ಕಾಳರಾತ್ರಿ ನಾಮಾಂಕಿತದಿಂದ ರಾತ್ರಿ ಸಂಚಾರ ಮಾಡುತ್ತಾಳೆ ಎಂಬುದು ತಿಗಳ ಸಮುದಾಯದ ನಂಬಿಕೆ ಎಂದು ಹಿರಿಯ ಗಣಾಚಾರಿಗಳು ಹೇಳುತ್ತಾರೆ.

ಹನ್ನೊಂದು ದಿನಗಳ ಕಾಲ ನಡೆಯುವ ಕರಗ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳ ಪೈಕಿ ಹಸಿ ಕರಗ ಮತ್ತು ಕರಗ ಮಹೋತ್ಸವ ಅತ್ಯಂತ ಪ್ರಧಾನವಾದದ್ದು. ಹೋಮ, ಧ್ವಜಾರೋಹಣದ ನಂತರ ಮೇ 16ರಂದು ಹಸಿಕರಗ ನಡೆಯಿತು. ಕರಗ ಉತ್ಸವಕ್ಕೆ ದೇವಾಲಯ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ನಗರದಲ್ಲಿನ ಪ್ರತಿಯೊಂದು ದೇವಾಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ಇಡೀ ನಗರದ ಬೀದಿಗಳಲ್ಲಿ ಮತ್ತು ದೇವಾಲಯಗಳಿಗೆ ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ADVERTISEMENT

ಅನೇಕ ಕಡೆ ಐದು ನೂರು ಕೆ.ಜಿ.ಯಿಂದ ಒಂದೂವರೆ ಟನ್‌ವರೆಗಿನ ವಿವಿಧ ಜಾತಿಯ ಹೂವುಗಳಿಂದ ರಂಗೋಲಿ ಬಿಡಿಸಲಾಗಿತ್ತು. ಈ ಬಾರಿ ನಿಗದಿತ ಸಮಯಕ್ಕಿಂತ ಒಂದೂವರೆ ತಾಸು ವಿಳಂಬವಾಗಿ ಕರಗ ಹೊರಟಿತು. ಕರಗ ಹೊತ್ತ ಮೇಲಿನ ತೋಟದ ರವಿಕುಮಾರ್ ಹಿಂದೆ ನೂರಾರು ವೀರ ಕುಮಾರರು ರಕ್ಷಣಾತ್ಮಕವಾಗಿ ಸಾಗಿ ಕೈಯಲ್ಲಿ ಹಿಡಿದಿದ್ದ ಕತ್ತಿಯಿಂದ ಅಲುಗೆ ಸೇವೆ ಸಮರ್ಪಿಸುತ್ತಿದ್ದರು. ಭಕ್ತರುಕರಗಕ್ಕೆ ಮಲ್ಲಿಗೆ ಮೊಗ್ಗು ಎಸೆದು ಭಕ್ತಿ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.