ADVERTISEMENT

ಲೋಕ ಕಲ್ಯಾಣಾರ್ಥ ಧಾರ್ಮಿಕ ಕಾರ್ಯ ನಡೆಯಲಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 14:36 IST
Last Updated 25 ಆಗಸ್ಟ್ 2019, 14:36 IST
ವಿಜಯಪುರದ 23 ನೇ ವಾರ್ಡಿನ ರಹಮತ್‌ ನಗರದಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿ ಆಯೋಜಿಸಿದ್ದ ಗಂಜಿಪೂಜೆ ಕಾರ್ಯಕ್ರಮದಲ್ಲಿ ಭಕ್ತರು ಗಂಜಿ ತುಂಬಿದ ಮಡಿಕೆಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು
ವಿಜಯಪುರದ 23 ನೇ ವಾರ್ಡಿನ ರಹಮತ್‌ ನಗರದಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿ ಆಯೋಜಿಸಿದ್ದ ಗಂಜಿಪೂಜೆ ಕಾರ್ಯಕ್ರಮದಲ್ಲಿ ಭಕ್ತರು ಗಂಜಿ ತುಂಬಿದ ಮಡಿಕೆಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು   

ವಿಜಯಪುರ: ಲೋಕ ಕಲ್ಯಾಣಾರ್ಥವಾಗಿ ಶ್ರಾವಣ ಮಾಸದಲ್ಲಿ ಓಂ ಶಕ್ತಿ ಪೂಜೆ ಕಾರ್ಯಕ್ರಮಗಳ ಆಯೋಜನೆಯಿಂದ ಉತ್ತಮ ಮಳೆ, ಬೆಳೆಗಳಾಗುತ್ತವೆ ಎಂದು ಗಂಜಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಗರತ್ನಮ್ಮ ಹೇಳಿದರು.

ಇಲ್ಲಿನ 23 ನೇ ವಾರ್ಡಿನ ರಹಮತ್‌ ನಗರದಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿ ಆಯೋಜಿಸಿದ್ದ ಗಂಜಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಈಚೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. ನಮ್ಮ ಧಾರ್ಮಿಕ ಸಂಸ್ಕೃತಿ, ದೇವಾಲಯಗಳು, ಪೂಜಾ ವಿಧಿವಿಧಾನಗಳು, ಸೇರಿದಂತೆ ಎಲ್ಲವನ್ನೂ ಮರೆಯುತ್ತಿದ್ದಾರೆ. ಆದ್ದರಿಂದ ಪ್ರತಿವರ್ಷ ಗಂಜಿಪೂಜೆ ಆಯೋಜನೆ ಮಾಡುತ್ತಿದ್ದೇವೆ’ ಎಂದರು.

ADVERTISEMENT

‘ರಾತ್ರಿ 12 ಗಂಟೆಗೆ ಬಾಸ್ಮತಿ ಅಕ್ಕಿಯಿಂದ ಹೊಸ ಮಡಿಕೆಯಲ್ಲಿ ಗಂಜಿ ತಯಾರಿಸಿ, ವಿವಿಧ ಮಂತ್ರಪಠಣ ಮಾಡಿದ ನಂತರ ಭಕ್ತರು, ಓಂ ಶಕ್ತಿ ದೇವಾಲಯದ ದೀಕ್ಷಾವಸ್ತ್ರಗಳನ್ನು ಧರಿಸಿಕೊಂಡು ಮಡಿಕೆಗಳನ್ನು ತಲೆಯ ಮೇಲೆ ಇಟ್ಟುಕೊಂಡು ಊರನ್ನು ಸುತ್ತುಹಾಕಿ ಒಳಿತು ಬಯಸುತ್ತಾರೆ. ಇದರಿಂದ ಊರಿನ ಸುತ್ತ ಇರುವ ದುಷ್ಟಶಕ್ತಿಯಿಂದ ಆಗಬಹುದಾದ ಕೇಡು ತಪ್ಪಿ ಹೋಗಿ ಜನರು ನೆಮ್ಮದಿಯಾಗಿ ಬದುಕಲಿಕ್ಕೆ ಸಾಧ್ಯವಾಗುತ್ತದೆ’ ಎಂದರು.

ಧಾರ್ಮಿಕ ಮುಖಂಡ ಟಿಲ್ಲರ್ ಮಂಜುನಾಥ್ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯಬೇಕು. ಯುವಜನರು ಪಾಲ್ಗೊಳ್ಳುವ ಮೂಲಕ ಇಂತಹ ಕಾರ್ಯಗಳಿಗೆ ಶಕ್ತಿ ತುಂಬಬೇಕು ಎಂದರು.

ಓಂ ಶಕ್ತಿ ಭಕ್ತಾದಿಗಳು ದೀಕ್ಷಾ ವಸ್ತ್ರಗಳನ್ನು ಧರಿಸಿ ಮಂಗಳವಾದ್ಯಗಳಿಗೆ ನೃತ್ಯ ಮಾಡುತ್ತಾ, ಪಲ್ಲಕ್ಕಿಯೊಂದಿಗೆ ಗಂಜಿ ತುಂಬಿಕೊಂಡಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೈವೇದ್ಯ, ಹೋಮ, ಹವನಗಳನ್ನು ಮಾಡುವ ಮೂಲಕ ಪೂಜಾ ವಿಧಿವಿಧಾನ ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಚೈತ್ರಾ, ಸೌಮ್ಯ, ಭಾಗ್ಯಮ್ಮ, ಭವ್ಯ, ರಾಮು, ಗೀತಾ, ಸುಮಿತ್ರಮ್ಮ, ಕೌಸಲ್ಯ, ಪದ್ಮಮ್ಮ, ಶೋಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.