ADVERTISEMENT

ದೇವನಹಳ್ಳಿ: ರಾಜ್ಯ ಚುನಾವಣೆ ಹಿನ್ನೆಲೆ ಮಾಧ್ಯಮ ಪ್ರಮಾಣೀಕರಣ ಸಮಿತಿ ತರಬೇತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 7:21 IST
Last Updated 17 ಮಾರ್ಚ್ 2023, 7:21 IST
ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ (ಎಂಸಿಎಂಸಿ) ಸದಸ್ಯರ ತರಬೇತಿ ಸಭೆಯಲ್ಲಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು
ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ (ಎಂಸಿಎಂಸಿ) ಸದಸ್ಯರ ತರಬೇತಿ ಸಭೆಯಲ್ಲಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು   

ದೇವನಹಳ್ಳಿ: ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಚಿಸಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ (ಎಂಸಿಎಂಸಿ) ಸದಸ್ಯರ ತರಬೇತಿಯು ಗುರುವಾರ ನಡೆಯಿತು.

ರಾಜ್ಯಮಟ್ಟದ ತರಬೇತುದಾರ ಡಾ.ಅಮೀರ್‌ ಪಾಷ ಮಾತನಾಡಿ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ದೇಶವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಹೆಸರಾಗಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಲು ಬಯಸುವ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರಕಟಣೆಗೆ ಮೂರು ದಿನಗಳ ಮುಂಚಿತವಾಗಿ, ಮಾನ್ಯತೆ ಹೊಂದಿರದ ರಾಜಕೀಯ ಪಕ್ಷಗಳು ಏಳು ದಿನಗಳ ಮುಂಚಿತವಾಗಿ ಜಾಹೀರಾತಿನ ದೃಢೀಕೃತ ಹಾಗೂ ಸಾಫ್ಟ್ ಪ್ರತಿಗಳೊಂದಿಗೆ ಜಿಲ್ಲಾ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ADVERTISEMENT

ಸಮಿತಿಯು ನಿಗದಿತ ಕಾಲಾವಧಿಯಲ್ಲಿ ಜಾಹೀರಾತನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕು. ಇ-ಪೇಪರ್‌ಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು
ತಿಳಿಸಿದರು.

ಯಾವುದಾದರೂ ಅಭ್ಯರ್ಥಿ ಪರವಾಗಿ, ಬೆಂಬಲಿಸಿ ಪ್ರಕಟವಾಗುವ ಸುದ್ದಿಗಳನ್ನು ಗಮನಿಸಿ, ಪಾವತಿ ಸುದ್ದಿ (ಪೇಡ್‌ ನ್ಯೂಸ್) ಗುರುತಿಸಿ ಜಿಲ್ಲಾ ಚುನಾವಣಾಧಿಕಾರಿಯ ಗಮನಕ್ಕೆ ತರಬೇಕು. ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿ ಮೂಲಕ ಅಂತಹ ಅಭ್ಯರ್ಥಿಗೆ ನೋಟಿಸ್‌ ಜಾರಿ ಮಾಡಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ಟಿ.ವಿ ವಾಹಿನಿಗಳನ್ನು ನಿರಂತರವಾಗಿ ವೀಕ್ಷಿಸಿ ವರದಿ ನೀಡಬೇಕು ಎಂದು ಹೇಳಿದರು.

ತರಬೇತಿ ನೋಡಲ್‌ ಅಧಿಕಾರಿಯಾದ ಉಪ ಕೃಷಿ ನಿರ್ದೇಶಕಿ ವಿನುತಾ, ಎಂಸಿಎಂಸಿ ನೋಡಲ್‌ ಅಧಿಕಾರಿ, ವಾರ್ತಾ ಉಪ ನಿರ್ದೇಶಕ ಮಂಜುನಾಥ ಡೊಳ್ಳಿನ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್‌.ಎಂ., ಸಮಿತಿ ಸದಸ್ಯರಾದ ಪತ್ರಕರ್ತ ನಾಗರಾಜ ಅಶ್ವತ್ಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಗಂಗಾಧರ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ ಜೆ. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.