ADVERTISEMENT

ಮತ್ತೆ ಅವರಿಸಲಿದೆಯೇ ಗಣಿ ದೂಳು ?

ರೆಸಾರ್ಟ್ ರಾಜಕಾರಣದಿಂದ ಸ್ಥಗಿತಗೊಂಡಿದ್ದ ಗಣಿಗಳಲ್ಲಿ ಚಟುವಟಿಕೆ ಆರಂಭ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:33 IST
Last Updated 22 ಜುಲೈ 2019, 19:33 IST
ತೈಲಗೆರೆಯ ಬಳಿ ನಡೆಯುತ್ತಿರುವ ಗಣಿಗಾರಿಕೆ
ತೈಲಗೆರೆಯ ಬಳಿ ನಡೆಯುತ್ತಿರುವ ಗಣಿಗಾರಿಕೆ   

ದೇವನಹಳ್ಳಿ: ರೆಸಾರ್ಟ್‌ ರಾಜಕಾರಣದಿಂದ ಸ್ಥಗಿತಗೊಂಡಿದ್ದ ಗಣಿಗಾರಿಕೆ ಮತ್ತೆ ಆರಂಭವಾಗುವ ಭೀತಿ ಸ್ಥಳೀಯರಿಗೆ ಎದುರಾಗಿದೆ. ಬೈಯಾಪ ಅರಣ್ಯೀಕರಣ ಯೋಜನೆಯಡಿ 25ಕಿ.ಮೀ ವ್ಯಾಪ್ತಿಯಲ್ಲಿ ಬರುವ ತೈಲಗೆರೆ, ಮೀಸಗಾನಹಳ್ಳಿ, ಸೋಣ್ಣೆನಹಳ್ಳಿ, ಕೊಡಗುರ್ಕಿ ಗ್ರಾಮದ ಕೆಲವು ಸರ್ವೇ ನಂಬರ್‌ಗಳಲ್ಲಿ 2016ನೇ ಸಾಲಿನಲ್ಲಿ ಒಂದೆರಡು ಗಣಿ ಮಾಲೀಕರಿಗೆ ಪರವಾನಗಿ ನೀಡಿತ್ತು.

ಪರವಾನಗಿ ಜತೆಗೆ ಅಕ್ರಮ ಗಣಿಗಾರಿಕೆ ದಿನದ 24 ತಾಸು ನಡೆಯುತ್ತಿತ್ತು. ತೈಲಗೆರೆ ಸ.ನಂ.110ರ ವ್ಯಾಪ್ತಿಯಲ್ಲಿರುವ ಒಟ್ಟು ಸರ್ಕಾರಿ ಗೋಮಾಳ 211ಎಕರೆ 16ಗುಂಟೆ ಉಳಿಸಲು ರೈತರು, ಗ್ರಾಮಸ್ಥರು ಹೋರಾಟ ನಡೆಸುತ್ತಲೇ ಇದ್ದಾರೆ.

ರೆಸಾರ್ಟ್ ರಾಜಕಾರಣದಿಂದಾಗಿ ಜೆಡಿಎಸ್ ಶಾಸಕರು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಮುಂಭಾಗದಲ್ಲೇ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ತಂಗಿದ್ದಾಗ ಗಣಿ ಸದ್ದು ಸ್ತಬ್ಧಗೊಂಡಿದೆ. ಮತ್ತೆ ಗಣಿ ದೂಳು ಅವರಿಸಲಿದೆಯೇ ಎಂಬ ಚಿಂತೆ ಸ್ಥಳೀಯರನ್ನು ಕಾಡುತ್ತಿದೆ.

ADVERTISEMENT

ಬೈಯಾಪ ಅರಣ್ಯೀಕರಣ ಯೋಜನೆಗೆ ಗಣಿಗಾರಿಕೆಯಿಂದ ಕುತ್ತು ಬರುತ್ತಿದೆ ಎಂಬುದು ಒಂದೆಡೆಯಾದರೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಸ್ವಾಧೀನಪಡಿಸಿರುವ 405.33 ಎಕರೆ ಜಾಗದಲ್ಲಿಯೇ ಅಕ್ರಮ ಗಣಿಗಾರಿಕೆ ನಡೆದು ಅಪಾರವಾದ ಅಳದಗುಂಡಿ, ಕೊರಕಲು ಪ್ರದೇಶ ನಿರ್ಮಾಣವಾಗಿದೆ. ಈ ಜಾಗವನ್ನು ಹರಾಜು ಹಾಕಲು ಗೃಹ ನಿರ್ಮಾಣ ಮಂಡಳಿ ಮುಂದಾಗಿತ್ತು. ಯಾವ ಬಿಡ್‌ದಾರರು ಖರೀದಿಗೆ ಮುಂದಾಗಿಲ್ಲ ಎನ್ನುತ್ತಾರೆ ಸ್ಥಳೀಯ ಮುಖಂಡರೊಬ್ಬರು.

ನಂದಿಬೆಟ್ಟದ ಬುಡದಿಂದ ಆರಂಭವಾಗುವ ಅರ್ಕಾವತಿ ಕ್ಯಾಚ್‌ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಗಣಿ ಪ್ರದೇಶ ವ್ಯಾಪ್ತಿಯ ಎರಡು ಕಿ.ಮೀ ಕನಿಷ್ಠ ಮಿತಿಯಲ್ಲಿ ಒಟ್ಟು 27 ಗ್ರಾಮಗಳ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆ ಅವಕಾಶ ನೀಡುವಂತಿಲ್ಲ ಎಂದು 2013 ಸೆ. 24ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, 2016ರಲ್ಲಿ ಕೆಲವು ಪ್ರಭಾವಿಗಳಿಗೆ ಮಣಿದು ಅಧಿಕಾರಿಗಳು ಗಣಿಕಾರಿಕೆಗೆ ಅನುಮತಿ ನೀಡಿತ್ತು. ಪರವಾನಗಿ ಪಡೆದ ಗಣಿ ಮಾಲೀಕರು ರೆಸಾರ್ಟ್‌ನಲ್ಲಿ ಶಾಸಕರು ತಂಗಿದ ತಕ್ಷಣ ಗಣಿಗಾರಿಕೆ ನಿಲ್ಲಿಸಿದ್ದು ಯಾಕೆ? ಇದರಲ್ಲಿ ಕೆಲ ಅನುಮಾನಗಳಿದ್ದು, ಇದು ಅಕ್ರಮವಲ್ಲದೆ ಮತ್ತೇನು? ಎಂದು ಪ್ರಶ್ನಿಸುತ್ತಾರೆ ಆರ್‌ಟಿಐ ಕಾರ್ಯಕರ್ತ ಚಿಕ್ಕೇಗೌಡ.

ಶಾಸಕರು ರೆಸಾರ್ಟ್‌ನಲ್ಲಿ ತಂಗಿದ್ದ ಸಮಯದದಲ್ಲಿ ಗಣಿಸ್ಫೋಟ, ಶಬ್ದ, ದೂಳು, ಲಾರಿಗಳ ಸಂಚಾರದ ಭರಾಟೆ ಕಳೆದ 20 ದಿನಗಳಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ರೈತ ಸಂಘದ ಸದಸ್ಯ ಮುದ್ದನಾಯಕನಹಳ್ಳಿ ರಮೇಶ್.

2015 ಅ. 26ರಂದು ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಜಿಲ್ಲಾ ಕಾರ್ಯಪಾಲಕ ಎಂಜಿನಿಯರ್, ಜಿಲ್ಲಾಧಿಕಾರಿಗೆ ಪತ್ರ ಬರೆದು ಸೊಣ್ಣೇನಹಳ್ಳಿ, ಮೀಸಗಾನಹಳ್ಳಿ, ತೈಲಗೆರೆ ಮತ್ತು ಕೊಡಗುರ್ಕಿ ಗ್ರಾಮಗಳ ವ್ಯಾಪ್ತಿಯ ವಿವಿಧ ಸ.ನಂ.ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರಳು ದಂಧೆ ನಡೆಯುತ್ತಿದೆ. ಜಲ್ಲಿಕ್ರಷರ್‌ನಿಂದ ವಸತಿ ಯೋಜನೆಗೆ ಧಕ್ಕೆಯಾಗಲಿದೆ. ಪರಿಸರ, ಜೀವ ಸಂಕುಲಕ್ಕೂ ತೊಂದರೆಯಾಗಲಿದೆ. ಸದರಿ ಸರ್ವೇ ನಂಬರ್‌ಗಳ 200 ಮೀಟರ್ ವ್ಯಾಪ್ತಿಯ ಸುತ್ತ ಬಫರ್‌ ವಲಯದಲ್ಲೂ ಇಂತಹ ಕಾರ್ಯಕ್ಕೆ ಅನುಮತಿ ನೀಡಲಾಗಿದ್ದು ರದ್ದುಗೊಳಿಸುವಂತೆ ಕೋರಿದ್ದರು. ಅಧಿಕಾರಿಗಳ ಪತ್ರಕ್ಕೂ ಬೆಲೆ ನೀಡದ ಅಂದಿನ ಜಿಲ್ಲಾಧಿಕಾರಿ ವಾರ್ಷಿಕವಾಗಿ ನವೀಕರಣ ಮಾಡತ್ತಲೇ ಇದ್ದಾರೆ ಎಂದು ದಾಖಲೆ ಸಹಿತ ಮಾಹಿತಿ ನೀಡಿ ಬೇಸರ ವ್ಯಕ್ತಪಡಿಸುತ್ತಾರೆ ಆರ್‌ಟಿಐ ಕಾರ್ಯಕರ್ತರೊಬ್ಬರು.

ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಕಡಿವಾಣ ಹಾಕಲು ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಠರಾವು ಮಂಡಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಅನೇಕ ಬಾರಿ ಕಡತ ರವಾನಿಸಲಾಗಿದೆ. ಗ್ರಾಮ ಪಂಚಾಯಿತಿ ಪ್ರಭಾವಿ ಸದಸ್ಯರೊಬ್ಬರು ತಮ್ಮ ಪರಮಾಪ್ತರ ಹೆಸರಿನಲ್ಲಿ ಗಣಿಗಾರಿಕೆ ಅನುಮತಿಗಾಗಿ ತಹಶೀಲ್ದಾರ್ ಕಚೇರಿಗೆ ಆರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.