ADVERTISEMENT

ಮೃತ ಕುಟುಂಬಕ್ಕೆ1ಕೋಟಿ ‍ಪರಿಹಾರ, ಸರ್ಕಾರಿ ನೌಕರಿ ಕೊಡಿ: ಶಾಸಕ ಧೀರಜ್‌ ಮುನಿರಾಜು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:13 IST
Last Updated 6 ಜೂನ್ 2025, 13:13 IST
ದೊಡ್ಡಬಳ್ಳಾಪುರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹಾಗೂ ಬಿಜೆಪಿ ರಾಜ್ಯ ಯುವ ಘಟಕದ ಅಧ್ಯಕ್ಷ ಧೀರಜ್‌ ಮುನಿರಾಜು ಮಾತನಾಡಿದರು
ದೊಡ್ಡಬಳ್ಳಾಪುರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹಾಗೂ ಬಿಜೆಪಿ ರಾಜ್ಯ ಯುವ ಘಟಕದ ಅಧ್ಯಕ್ಷ ಧೀರಜ್‌ ಮುನಿರಾಜು ಮಾತನಾಡಿದರು   

ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ನೇರ ಕಾರಣ ಎಂದು ದೂರಿರುವ ಶಾಸಕ ಧೀರಜ್‌ ಮುನಿರಾಜು, ಮೃತರ ಕುಟುಂಬಕ್ಕೆ ₹1ಕೋಟಿ ಪರಿಹಾರ, ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆರ್‌ಸಿಬಿ ಕ್ರಿಕೆಟ್‌ ತಂಡವು ಆಟದ ಅಂತಿಮ ಹಂತಕ್ಕೆ ಹೋದಾಗಲೇ ಗೆಲುವು-ಸೋಲು ಎರಡಕ್ಕೂ ಅಗತ್ಯ ಇರುವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಪೊಲೀಸ್‌ ಹಾಗೂ ಗುಪ್ತಚರ ಇಲಾಖೆ ಮಾಹಿತಿ ಪಡೆಯದೇ ಆರ್‌ಸಿಬಿ ವಿಜಯೋತ್ಸವದ ಲಾಭ ಪಡೆದುಕೊಳ್ಳಲು ಸರ್ಕಾರ ಆತುರ ಪಟ್ಟಿದ್ದೆ ಇದಕ್ಕೆ ದುರಂತಕ್ಕೆ ಕಾರಣ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೋಷಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನೇ ಅನಾಹುತದ ತನಿಖೆಗೆ ನೇಮಕ ಮಾಡಿದ್ದಾರೆ. ಇಂತಹ ಅಧಿಕಾರಿಗಳಿಂದ ಯಾವ ರೀತಿಯ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯ ಎಂದು ಅನುಮಾನ ವ್ಯಕ್ತಪಡಿಸಿದರು.

ADVERTISEMENT

ಮಕ್ಕಳು, ಮೊಮ್ಮಕಳಿಗಾಗಿ ಕಾರ್ಯಕ್ರಮ:  ವಿಧಾನಸೌಧದ ಬಳಿ ರಾಜ್ಯಪಾಲರನ್ನು ಆಹ್ವಾನಿಸಿ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಶಾಸಕರು, ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಬೇಕಿತ್ತು. ಆದರೆ ಕಾಂಗ್ರೆಸ್‌ ಪಕ್ಷದ ಮುಖಂಡರ ಮಕ್ಕಳು ಮತ್ತು ಸಂಬಂಧಿಕರೇ ತುಂಬಿದ್ದರು. ಅವರ ಮಕ್ಕಳು, ಮೊಮ್ಮಕಳು ಆರ್‌ಸಿಬಿ ತಂಡದವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಕಾರ್ಯಕ್ರಮವಾಗಿಸಿದ್ದಾರೆ ಎಂದು ದೂರಿದರು.

ಬಿಜೆಪಿ ರಾಜ್ಯ ವಕ್ತಾರ ದೊಡ್ಡೇರಿ ವೆಂಕಟೇಶ್‌, ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ವಕ್ತಾರರಾದ ಪುಷ್ಪಾಶಿವಶಂಕರ್‌, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ,ನಗರಸಭೆ ಸದಸ್ಯ ಬಂತಿವೆಂಕಟೇಶ್‌, ಬಿಜೆಪಿ ಕಾರ್ಯಾಲಯದ ಮಂಜುನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.