
ಆನೇಕಲ್: ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗಣರಾಜ್ಯೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಆನೇಕಲ್ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಒಂದು ಎಕರೆಯಲ್ಲಿ ಸುಸಜ್ಜಿತ ಸರ್ಕಾರಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಜಾಗ ಗುರುತಿಸಲಾಗುತ್ತಿದೆ. ಇದರಿಂದಾಗಿ ಅಧ್ಯಯನಕ್ಕಾಗಿ ಬೇರೆಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ಐದು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ತಲಾ ₹50ಸಾವಿರ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ₹17 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುತ್ತಿದ್ದು ಶೇ 90ರಷ್ಟು ಕಾಮಗಾರಿ ಮುಗಿದಿದ್ದು ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದರು.
ಫೆ.15ರಿಂದ ಶಾಸಕರ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಉಪಯುಕ್ತವಾಗಲಿದೆ. ಆನೇಕಲ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ₹50ಲಕ್ಷ ವೆಚ್ಚದಲ್ಲಿ 15 ಲಕ್ಷ ಸಾಮರ್ಥ್ಯದ ಜಲಸಂಗ್ರಹಗಾರ ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದರು.
ಹೋಬಳಿಗೊಂದು ಸರ್ಕಾರಿ ಪದವಿ ಕಾಲೇಜು ಮತ್ತು ಹೆಬ್ಬಗೋಡಿ, ಸರ್ಜಾಪುರ ಮತ್ತು ಅತ್ತಿಬೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜು ತೆರೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಗುಂಡಿಗಳು ಬಿದ್ದಿದ್ದು ₹200ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರಾಗಲಿದೆ. ₹18 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಸ್ಥಾಪಿಸಲು ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 13ನೇ ಸ್ಥಾನ ಪಡೆದಿಕೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಮತ್ತಷ್ಟು ಕಾಳಜಿವಹಿಸಿ ರಾಜ್ಯಮಟ್ಟದ ಸ್ಥಾನ ಪಡೆಯಬೇಕು. ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ. ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯತೀತ ಹಾಗೂ ಗಣರಾಜ್ಯದ ಗುಣ ಲಕ್ಷಣಗಳನ್ನು ಹೊಂದಿರುವುದು ಭಾರತ ಸಂವಿಧಾನದ ವಿಶೇಷವಾಗಿದೆ ಎಂದರು.
ಪಟ್ಟಣದ ಅಂಬೇಡ್ಕರ್ ಪತ್ರಿಮೆಗೆ ಪುಷ್ಪನಮನ ಸಲ್ಲಿಸಿ, ಅಮರ್ ಜವಾನ್ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು. ಆನೇಕಲ್ ಸಂತ ಜೋಸೆಫ್ ಶಾಲೆ, ಬನ್ನೇರುಘಟ್ಟದ ಸಾಯಿ ಸದ್ಭಾವನಾ ಶಾಲೆ, ಹೆಬ್ಬಗೋಡಿ ಎಸ್‌ಎಫ್‌ಎಸ್ ಶಾಲೆ, ಮುತ್ತಾನಲ್ಲೂರು ಮಹಾತ್ಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಜಿ.ಪಂ ಎಂಜಿನಿಯರಿಂಗ್ ವಿಭಾಗದ ಮಹದೇವಯ್ಯ, ಆರೋಗ್ಯ ಇಲಾಖೆ ನಳಿನಾ, ಲೀಲಾವತಿ, ಯಶೋಧಾ, ಶ್ಯಾಂಭಟ್, ಶಿಕ್ಷಣ ಇಲಾಖೆ ರಾಜೇಶ್ವರಿ, ಅಂಗನವಾಡಿ ಶಿಕ್ಷಕಿ ಜಗದಂಭಾ, ವಿಜಯಲಕ್ಷ್ಮಿ, ಭಾಗ್ಯಮ್ಮ, ಸವಿತಾ, ಶಾಂತಿಪುರ ಗ್ರಾ.ಪಂ ಕಾರ್ಯದರ್ಶಿ ಸದಾಶಿವ, ಇಂಡ್ಲವಾಡಿ ಬಸವರಾಜು, ಡಾ.ಮೀನಾಕ್ಷಿ, ಜಿಗಣಿ ಗೋಪಾಲ್, ಶಂಕರ್ ನರಸಾಪುರ, ಜಿ.ಮುನಿರಾಜು, ಜಿ.ಪಿಲ್ಲಪ್ಪ, ಸ್ಟೇಟ್ ರಾಜು ಅವರನ್ನು ಸನ್ಮಾನಿಸಲಾಯಿತು.
ಆನೇಕಲ್ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಪುರುಷೋತ್ತಮರೆಡ್ಡಿ, ಎನ್.ಎಸ್.ಪದ್ಮನಾಭ, ಮುನಾವರ್, ರಾಜೇಂದ್ರ ಪ್ರಸಾದ್, ಪುಷ್ಪರಾಜು, ಅಭಿ, ಇಒ ಮಂಜುನಾಥ್, ಕರಿಯ ನಾಯಕ, ಕುಮಾರ್, ತಿಪ್ಪೇಸ್ವಾಮಿ, ಜಿ.ಗುರುಮೂರ್ತಿ, ಮಹೇಶ್, ಆಶಾ, ಡಾ.ರವಿ, ಮಂಜುನಾಥ್, ಗೋಪಾಲ್, ನರೇಂದ್ರಕುಮಾರ್, ಶಿವರಾಮಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.