ಹೊಸಕೋಟೆ: ‘ಕೊರೊನಾ ಎರಡನೇ ಅಲೆ ಪ್ರಾರಂಭವಾದಾಗಿನಿಂದ ಎಲ್ಲಿಯೂ ಕಾಣಿಸದೆ,ಕೋಲಾರದ ಉಸ್ತುವಾರಿಯನ್ನೂ ನಿರ್ವಹಿಸದೆ ಈಗ ತಾಲ್ಲೂಕಿನಲ್ಲಿ ಅನಾವಶ್ಯಕವಾಗಿ ರಾಜಕೀಯ ಮಾಡುವುದನ್ನು ನಿಲ್ಲಿಸಿ’ ಎಂದು ಸಚಿವ ಎಂಟಿಬಿ ನಾಗರಾಜ್ ಅವರಿಗೆ ಶಾಸಕ ಶರತ್ ಬಚ್ಚೇಗೌಡ ತಿರುಗೇಟು ನೀಡಿದರು.
ತಾಲ್ಲೂಕಿನ ಅನುಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಾಲ್ಲೂಕಿನಲ್ಲಿ ಸಚಿವರು ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ದಿನಸಿ ಕಿಟ್ ಹಂಚುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಅದನ್ನು ತಾವೇ ಹಂಚುತ್ತಿರುವುದಾಗಿ ಜನತೆಯ ಬಳಿ ಸುಳ್ಳುಹೇಳುತ್ತಿದ್ದಾರೆ’ ಎಂದು ಶಾಸಕರು ಆರೋಪಿಸಿದರು.
‘ತಾಲ್ಲೂಕಿನಲ್ಲಿ ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ಮಾಡಿಸಿ ತಾಲ್ಲೂಕನ್ನು ಅಭಿವೃದ್ಧಿ ಮಾಡಿರುವುದಾಗಿ ಸಚಿವರು ಹೇಳಿ ತಮ್ಮ ಮತ್ತು ಸಂಸದ ಬಚ್ಚೇಗೌಡರು ತಾಲ್ಲೂಕಿಗೆ ಮಾಡಿರುವ ಕೆಲಸಗಳ ಬಗ್ಗೆ ಮಾತನಾಡುತ್ತಾರೆ. ಆದರೆ ತಾಲ್ಲೂಕಿನಲ್ಲಿ ಇರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳು ನಿರ್ಮಾಣವಾಗಿರುವುದೇ ಸಂಸದ ಬಿ.ಎನ್. ಬಚ್ಚೇಗೌಡ ಶಾಸಕರಾಗಿದ್ದಾಗ’ ಎಂದರು.
‘ಕೊರೊನಾದಿಂದಾಗಿ ಜನತೆ ಸಮಸ್ಯೆ ಎದುರಿಸುತ್ತಿದ್ದಾಗ ಸಚಿವರು ಮನೆಯಿಂದ ಹೊರಬಂದಿಲ್ಲ. ನಾನು ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ ಜನತೆಗೆ ನೈತಿಕವಾಗಿ ಬೆಂಬಲವಾಗಿ ನಿಂತಿದ್ದೇನೆ. ಸೊಂಕಿತರಿಗೆ ಹಾಸಿಗೆ, ಔಷಧಿ, ವೆಂಟಿಲೇಟರ್‌ಗಳನ್ನು ವ್ಯವಸ್ಥೆ ಮಾಡುವ ಕೆಲಸದಲ್ಲಿ ನಿರತನಾಗಿದ್ದೇನೆ. ಸಚಿವರು ತಾವು ತಾಲ್ಲೂಕಿಗೆ ಮಾಡಿರುವ ಶಾಶ್ವತ ಕೆಲಸಗಳ ಬಗ್ಗೆ ಮಾಹಿತಿ ನೀಡಲಿ. ಕೊರೊನಾ ಸಂದರ್ಭದಲ್ಲಿ ಸಚಿವರು ರಾಜ್ಯದ ಎಷ್ಟು ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದಾರೆ ಎಂದು ಮಾಹಿತಿ ನೀಡಲಿ’ ಎಂದು ಸವಾಲು ಹಾಕಿದರು.
ಬೋಧನ ಹೊಸಹಳ್ಳಿ ಪ್ರಕಾಶ್ಮಾತನಾಡಿ, ಶಾಸಕರು ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನಲ್ಲಿ ಎಷ್ಟು ಕೆಲಸವನ್ನು ಮಾಡುತ್ತಿದ್ದಾರೆ ಎಂದು ಜನತೆ ನೋಡುತ್ತಿದ್ದಾರೆ. ರಾಜ್ಯದಲ್ಲಿಯೇ ಮಾದರಿಯಾದ ಫೀವರ್ ಕ್ಲೀನಿಕ್‌ಗಳನ್ನು ಮಾಡಿ ಕೊರೊನಾಸೋಂಕನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಕೊರೊನಾ ಅಬ್ಬರ ಕಡಿಮೆ ಮಾಡಿದ್ದಾರೆ
ಎಂದರು.
ಅನುಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಪ್ರದೀಪ್, ಮುಖಂಡ ತತ್ತನೂರು ಮಂಜುನಾಥ್, ಮುತ್ತಸಂದ್ರ ಕಿಟ್ಟಿ, ಕೃಷ್ಣಾರೆಡ್ಡಿ, ರಾಧಕೃಷ್ಣ, ಲಕ್ಷಣ್ ಸಿಂಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.