ADVERTISEMENT

ಹೊಸಕೋಟೆ: ನಗರಸಭೆ ಬಜೆಟ್ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:35 IST
Last Updated 10 ಮಾರ್ಚ್ 2022, 2:35 IST
ಹೊಸಕೋಟೆಯ ನಗರಸಭೆ ಆವರಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪೌರಾಯುಕ್ತ ರಮೇಶ್ ಮಾತನಾಡಿದರು
ಹೊಸಕೋಟೆಯ ನಗರಸಭೆ ಆವರಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪೌರಾಯುಕ್ತ ರಮೇಶ್ ಮಾತನಾಡಿದರು   

ಹೊಸಕೋಟೆ: ನಗರಸಭೆಯ 2022-23ನೇ ಸಾಲಿನ ಬಜೆಟ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಆಯವ್ಯಯ ಮಂಡಿಸಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್ ತಿಳಿಸಿದರು.

ನಗರಸಭೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಸಾರ್ವಜನಿಕರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳು ಮುಂದಿನ ವರ್ಷದ ನಗರದ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಉಪಯೋಗಕ್ಕೆ ಬರಲಿವೆ. ಹಣಕಾಸಿನ ಮಿತಿಯೊಳಗೆ ಅದನ್ನು ಸಾಧ್ಯವಾದಷ್ಟು ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಿನೋದ್ ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳ ಸಮಸ್ಯೆಯಿದೆ. ಇಲಾಖೆಯಿಂದ ಕೇಂದ್ರವೊಂದಕ್ಕೆ ತಿಂಗಳಿಗೆ ₹ 5,000 ಬಿಡುಗಡೆಯಾಗುತ್ತದೆ. ಅದರಲ್ಲಿ ಕಟ್ಟಡದ ಬಾಡಿಗೆ ಸೇರಿದಂತೆ ಎಲ್ಲವೂ ನಿರ್ವಹಿಸಲು ಕಷ್ಟವಾಗುತ್ತದೆ. ಎರಡು ಅಥವಾ ಮೂರು ವಾರ್ಡ್‌ಗಳಿಗೆ ಒಂದರಂತೆ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಜನಪ್ರತಿನಿಧಿ ಕೇಶವಮೂರ್ತಿ ಮಾತನಾಡಿ, ಹೆದ್ದಾರಿಯಲ್ಲಿ ಮಾಲೂರಿನ ಕಡೆಯಿಂದ ಬರುವ ವಾಹನಗಳು ಮುಖ್ಯರಸ್ತೆ ಕೂಡುವ ಸ್ಥಳದಲ್ಲಿ ನಿಲುಗಡೆಯಾಗುವ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿದೆ. ಅಲ್ಲಿರುವ ವಿಭಜಕವನ್ನು ತೆರವುಗೊಳಿಸಬೇಕು ಎಂದು ಕೋರಿದರು.

ಟೌನ್ ಬ್ಯಾಂಕ್ ನಿರ್ದೇಶಕ ಮೋಹನ್ ಕುಮಾರ್‌ ಮಾತನಾಡಿ, ಹೆದ್ದಾರಿಯ ಪಕ್ಕದಲ್ಲಿರುವ ಸರ್ವೀಸ್ ರಸ್ತೆಗಳಲ್ಲಿ ಟೋಲ್‌ನವರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಅಭಿವೃದ್ಧಿಗೆ ನಗರಸಭೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಕೋರಿದರು.

ನಾಗರಿಕ ನಂದರಾಮ್ ಸಿಂಗ್ ಮಾತನಾಡಿ, ಪಟ್ಟಣದೊಳಕ್ಕೆ ಬಿಎಂಟಿಸಿ ಬಸ್‌ಗಳು ಬರುತ್ತಿಲ್ಲ. ಹಳೆಯ ಬಸ್‌ನಿಲ್ದಾಣ ಈಗ ವಾಹನಗಳ ಪಾರ್ಕಿಂಗ್ ಸ್ಥಳವಾಗಿದೆ. ಖಾಸಗಿ ವಾಹನಗಳ ಪಾರ್ಕಿಂಗ್‌ಗಾಗಿ ಪ್ರತ್ಯೇಕ ಸ್ಥಳ ಮೀಸಲಿಟ್ಟು ಬಿಎಂಟಿಸಿ ಬಸ್‌ಗಳು ನಗರದ ಹಳೆಯ ಬಸ್ ನಿಲ್ದಾಣಕ್ಕೆ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಶೋಭಾ ಜುಂಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್‌ ಸೇರಿದಂತೆ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.