ADVERTISEMENT

ನಗರಸಭೆ ಈ ಬಾರಿ ‘ಕೈ’ ವಶ

ಪದಗ್ರಹಣ ಸಮಾರಂಭದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಆಶಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 5:44 IST
Last Updated 16 ಏಪ್ರಿಲ್ 2021, 5:44 IST
ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷರಾಗಿ ಕೆ.ಪಿ.ಜಗನ್ನಾಥ್‌ ಅವರಿಗೆ ಕಾಂಗ್ರೆಸ್‌ ಬಾವುಟ ನೀಡಿ ಅಧಿಕಾರ ವಹಿಸಿಕೊಟ್ಟ ಶಾಸಕ ಟಿ.ವೆಂಕಟರಮಣಯ್ಯ
ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷರಾಗಿ ಕೆ.ಪಿ.ಜಗನ್ನಾಥ್‌ ಅವರಿಗೆ ಕಾಂಗ್ರೆಸ್‌ ಬಾವುಟ ನೀಡಿ ಅಧಿಕಾರ ವಹಿಸಿಕೊಟ್ಟ ಶಾಸಕ ಟಿ.ವೆಂಕಟರಮಣಯ್ಯ   

ದೊಡ್ಡಬಳ್ಳಾಪುರ: ‘ನಗರಸಭೆ ಚುನಾವಣೆಗೆ ನಾನು ಸಿದ್ಧನಾಗಿದ್ದೇನೆ. ಹಾಗೆಯೇ ಎಲ್ಲಾ ವಾರ್ಡ್‌ಗಳ ಆಕಾಂಕ್ಷಿಗಳು ಈಗಿನಿಂದಲೇಸಿದ್ಧರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷರಾಗಿ ಕೆ.ಪಿ.ಜಗನ್ನಾಥ್‌ ಅವರಿಗೆ ಕಾಂಗ್ರೆಸ್‌ಬಾವುಟವನ್ನು ನೀಡುವ ಮೂಲಕ ಅಧಿಕಾರ ವಹಿಸಿಕೊಟ್ಟು ಮಾತನಾಡಿದರು.

‘ಎರಡು ವರ್ಷಗಳಿಂದಲು ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಎರಡು ವಾರಗಳ ಹಿಂದೆಯಷ್ಟೇ ನಗರಸಭೆ ಚುನಾವಣೆ ದಿನಾಂಕವನ್ನು ಪ್ರಕಟ ಮಾಡಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಮತ್ತೆ ದಿನಾಂಕವನ್ನು ಮುಂದೂಡಿದೆ. ಆದರೆ ಇದನ್ನೇ ನೆಪ ಮಾಡಿಕೊಂಡಿರುವ ಬಿಜೆಪಿ ಮುಖಂಡರು ತಮಗೆ ಬೇಕಾದಂತೆ ವಾರ್ಡ್‌ಗಳ ಮೀಸಲಾಯಿತಿಯನ್ನು ನಿಗದಿಪಡಿಸಿಕೊಂಡಿದ್ದಾರೆ’ ಎಂದರು.

ADVERTISEMENT

‘ನಗರಸಭೆಯ ಆಡಳಿತವನ್ನು ಈ ಬಾರಿ ಕಾಂಗ್ರೆಸ್‌ ಪಕ್ಷದ ತೆಕ್ಕೆಗೆ ಪಡೆಯಲು ಈಗಾಗಲೆ ಎಲ್ಲಾ ರೀತಿಯಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಟಿಕೆಟ್‌ ಹಂಚಿಕೆಯಲ್ಲಿ ಯಾವುದೆ ರೀತಿಯಒತ್ತಡಗಳಿಗೂ ಮಣಿಯದೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪಮೊಯಿಲಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕ ಕೃಷ್ಣಬೈರೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಮುಂತಾದವರು ಇರಲಿದ್ದಾರೆ. ಪಕ್ಷದ ವರಿಷ್ಟರು ಯಾರಿಗೆ ಟಿಕೆಟ್‌ ನೀಡಿದರು ಸಹ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಕೆಲಸ ಮಾಡಬೇಕು’ ಎಂದರು.

‘ಕಾರ್ಮಿಕರು, ರೈತರು ಯಾರೂ ಬಿಜೆಪಿ ಮುಖಂಡರಿಗೆ ಬೇಕಾಗಿಲ್ಲ. ಕಾರ್ಪೋರೇಟ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ಮಾತ್ರ ಕಾನೂನು, ಆಡಳಿತ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಆಡಳಿತ ನಡೆಸಿದ್ದ ಅವಧಿಯಲ್ಲಿನ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಬೆಲೆಗೂ ಈಗಿನ ಬೆಲೆಗೆ ಜನ ಹೋಲಿಕೆ ಮಾಡಿ ನೋಡಬೇಕು. ಸ್ವಚ್ಛ ಭಾರತ್‌ ಬಗ್ಗೆ ಭಾಷಣ ಮಾಡುವವರು ಬಡವರು ಶೌಚಾಲಯ ನಿರ್ಮಿಕೊಳ್ಳುವುದಕ್ಕೂ ಹಣ ನೀಡಲು ಇಲ್ಲದಂತಹ ಸ್ಥಿತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಂದಿವೆ. ಅಚ್ಚೇ ದೀನ್‌ ಬಗ್ಗೆ ಬೀದಿ ಬೀದಿಗಳಲ್ಲಿ ನಿಂತು ಭಾಷಣ ಮಾಡುತ್ತಿದ್ದ ಬಿಜೆಪಿ ಮುಖಂಡರು ಇಂದು ಜನರಿಗೆ ಉತ್ತರ ನೀಡಲಾಗದಷ್ಟು ಆಡಳಿತ ಕುಸಿತವಾಗಿದೆ. ಕುಡಿಯುವ ನೀರಿಗೆ ಕೊಳವೆಬಾವಿ ಕೊರೆಸಲು ಹಣ ನೀಡಿ ಎಂದು ಶಾಸಕರು ವಿಧಾನ ಸಭಾಅಧಿವೇಶನದಲ್ಲಿ ಬೇಡಿಕೊಂಡರು ಹಣ ನೀಡುತ್ತಿಲ್ಲ’ ಎಂದರು.

‘ನಗರೋತ್ಥಾನ ಯೋಜನೆ ಯಡಿಯಲ್ಲಿ ನಗರದ ಅಭಿವೃದ್ಧಿಗೆ ನೀಡಲಾಗಿದ್ದ ಹಣವನ್ನು ಹಿಂದಕ್ಕೆ ಪಡೆಯಲಾಗಿದೆ. ಇಷ್ಟಾದರು ಸಹ ಸ್ಥಳೀಯ ಬಿಜೆಪಿ ಮುಖಂಡರು ಕುಂಟು ನೆಪಗಳನ್ನು ಹೇಳುತ್ತಲೇ ಕಾಲಕಳೆಯುತ್ತಿದ್ದಾರೆ. ನಗರಸಭಾ ಚುನಾವಣೆಯಲ್ಲಿ ನಗರದ ಅಭಿವೃದ್ಧಿಗೆ ಮಾರಕವಾಗಿ ಬಿಜೆಪಿ ಮುಖಂಡರು ನಡೆದುಕೊಂಡ ಬಗೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದರು.

ಸಮಾರಂಭದಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ವರುಣ್‌, ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್‌.ವಿ.ಶ್ರೀವತ್ಸಾ, ಮುಖಂಡರಾದ ತಿ.ರಂಗರಾಜು, ಎಸ್‌.ಜಿ. ಸೋಮರುದ್ರಶರ್ಮ, ಎಂ.ಕೃಷ್ಣಮೂರ್ತಿ, ವಿ.ಆಂಜಿನಪ್ಪ, ಜೆ.ರಾಜೇಂದ್ರ, ಬಿ.ಜಿ. ಹೇಮಂತ್‌ರಾಜ್‌, ಆದಿತ್ಯನಾಗೇಶ್‌, ಬಿ.ಮುನಿರಾಜು ಇದ್ದರು.

ಕಾರ್ಮಿಕ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ಎಂ.ರಾಮು, ರಾಷ್ಟ್ರೀಯ ಮಜ್ದೂರ್‌ ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಿ.ಟಿ.ಪುನಿತ್‌ಕುಮಾರ್‌ ಅವರಿಗೂ ನೇಮಕಾತಿ ಆದೇಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.