
ಹೊಸಕೋಟೆ: ‘ಹೊಸಕೋಟೆ ವರೆಗೆ ಮೆಟ್ರೊ ವಿಸ್ತರಣೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಜೊತೆಗೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಶುಕ್ರವಾರ ನಗರದ ಚೆನ್ನಬೈರಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮೆಟ್ರೊ ರೈಲನ್ನು ಹೊಸಕೋಟೆ ವರೆಗೂ ವಿಸ್ತರಿಸಲು ಸರ್ಕಾರವನ್ನು ಕೋರಲಾಗಿದೆ. ಈ ಮೂಲಕ ಬೆಂಗಳೂರು ಹೊರ ವಲಯದ ನಗರಕ್ಕೆ ಮೆಟ್ರೊ ರೈಲು ಬಂದ ಹೆಗ್ಗಳಿಕೆ ಹೊಸಕೋಟೆ ಪಾತ್ರವಾಗಲಿದೆ ಎಂದರು.
ಸೂಲಿಬೆಲೆ, ನಂದಗುಡಿ ಮತ್ತು ಹೊಸಕೋಟೆ ಕೆರೆಗಳಿಗೆ ₹100–₹150 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಗತಯಲ್ಲಿದೆ. ತಾಲೂಕು ಕೇಂದ್ರದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಮೊದಲ ಬಾರಿಗೆ 28 ಸರ್ಕಾರಿ ಶಾಲೆಗಳಿಗೆ ಹೈಟೆಕ್ ಮೆರುಗು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಚೆನ್ನ ಭೈರೇಗೌಡ ಕ್ರೀಡಾಂಗಣಕ್ಕೆ ₹3 ಕೋಟಿಯಲ್ಲಿ ವೆಚ್ಚದಲ್ಲಿ ಚಾವಣಿ ಹಾಕಿಸಲಾಗುವುದು ಎಂದು ಭರವಸೆ ನೀಡಿದರು.
ಒಂದೂವರೆ ತಿಂಗಳ ಒಳಗೆ ತಹಶೀಲ್ದಾರ್ ಮೂಲಕ ತಾಲೂಕಿನ ಎಲ್ಲಾ ದರಖಾಸ್ತು ಭೂಮಿ ತಕರಾರು ಬಗೆಹರಿಸಿ ಹಕ್ಕುಪತ್ರ ವಿತರಿಸಲಾಗುವುದು. ಅರ್ಹರಿಗೆ ಶೀಘ್ರದಲ್ಲೇ ಇ-ಖಾತೆ ವಿತರಣೆ ಮಾಡಲಾಗುವುದು ಎಂದರು.
ತಹಶೀಲ್ದಾರ್ ಕೆ.ಎಸ್. ಸೋಮಶೇಖರ, ಡಿವೈಎಸ್ಪಿ ಮಲ್ಲೇಶ, ನಗರದ ಅಧ್ಯಕ್ಷ ಆಶಾ ರಾಜಶೇಖರ್, ಆಯುಕ್ತ ನೀಲಲೋಚನ ಪ್ರಭು, ಕ್ಷೇತ್ರಶಿಕ್ಷಣಾಧಿಕಾರಿ ಪದ್ಮನಾಬ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಬಾಬುರೆಡ್ಡಿ ಮೂರ್ತಿ, ಮುನಿರಾಜು, ಬಿ.ವಿ. ನಾಗರಾಜು, ಎಚ್.ಎನ್. ಮಂಜುನಾಥ್, ತಾಲ್ಲೂಕು ದೈಹಿಕ ಪರಿವೀಕ್ಷಣಾಧಿಕಾರಿ ರವಿಕುಮಾರ್ ಇದ್ದರು.
ಗಮನ ಸೆಳೆದ ಗಾಂಧಿ ವೇಷಧಾರಿ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗಾಂಧಿ ವೇಷಧಾರಿಯಾಗಿದ್ದ ಗಂಗಾಧರ್ ಪ್ರಮುಖ ಆಕರ್ಷಣೆಯಾಗಿದ್ದರು. ಚಿಕ್ಕ ಮಕ್ಕಳು, ಯುವಕರು, ವಯಸ್ಕರು ಗಾಂಧಿ ವೇಷಧಾರಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.
ಮುಂದಿನ ದಿನಗಳಲ್ಲಿ ಹೊಸಕೋಟೆ ನಗರ ಕಸ ಪ್ಪಾಸ್ಟಿಕ್ ಮತ್ತು ಡ್ರಕ್ಸ್ ಮುಕ್ತವಾಗಿಸಲು ಎಲ್ಲರು ಪಣ ತೊಡೋಣಶರತ್ ಬಚ್ಚೇಗೌಡ ಶಾಸಕ
ಸಾಧಕರಿಗೆ ಸತ್ಕಾರ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಿ.ಎನ್. ಚನ್ನೆಗೌಡಗೆ ಉತ್ತಮ ರೈತ ಪ್ರಶಸ್ತಿ ನಾರಾಯಣಸ್ವಾಮಿ ಮುನಿಶ್ಯಾಮಪ್ಪಗೆ ಉತ್ತಮ ಹೈನುಗಾರಿಕೆ ಮಂಜುನಾಥ್‌ಗೆ ಉತ್ತಮ ಮೀನುಸಾಕಾಣಿಕೆ ಚಿಕ್ಕನಾರಾಯಣಸ್ವಾಮಿಗೆ ಉತ್ತಮ ರೇಷ್ಮೆಗೂಡು ಸಾಕಣೆ ಪ್ರಶಸ್ತಿ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಸಾಧಕ ಮಹೇಶ್ ಅವರಿಗೆ ಕ್ರೀಡಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪವನ್ ಕಲ್ಯಾಣ್ ಸಂದೀಪ್ ಸಿಂಗ್ ಸಿಂಧು ಅಕ್ಷಯ್ ಭೂಮಿಕಾ ಫಾತಿಮಾ ಲಹರಿ ನರೇಂದ್ರರೆಡ್ಡಿ ಮೊದಲಾದವರಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಗಮನ ಸೆಳೆದ ‘ಆಪರೇಷನ್ ಸಿಂಧೂರ’
ನೃತ್ಯರೂಪಕ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಗೆ ವಿವಿಧ ಶಾಲೆಯ ಮಕ್ಕಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿತು. ಇದರಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಮಕ್ಕಳು ‘ಆಪರೇಷನ್ ಸಿಂಧೂರ’ದ ರೂಪಕ ಪ್ರದರ್ಶಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾದರು. ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಕೃತ್ಯ. ಇದಕ್ಕೆ ಪ್ರತೀಕಾರವಾಗಿ ಉಗ್ರರ ನೆಲಯನ್ನು ಗುರಿಯಾಗಿಸಿ ಭಾರತ ನಡೆಸಿದ ದಾಳಿಯನ್ನ ಮಕ್ಕಳು ರೂಪಕದಲ್ಲಿ ಪ್ರದರ್ಶಿಸಿ ನೋಡುಗರ ಮೆಚ್ಚುಗೆ ಗಳಿಸಿದರು. ಫಾತಿಮಾ ಶಾಲೆ ವಿದ್ಯಾರ್ಥಿಗಳಿಂದ ‘ಸಂಗೊಳ್ಳಿ ರಾಯಣ್ಣನ ವಿರಾಗತೆ’ ಸಿಟಿಜಾನ್ ಆಂಗ್ಲಶಾಲೆಯಿಂದ ‘ನಮ್ಮ ಹೀರೋಗಳು’ ನೃತ್ಯ ರೂಪಕ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜನನಿ ಜನ್ಮಭೂಮಿ ಸ್ವರ್ಗದಪಿ ನೃತ್ಯ ಪ್ರದರ್ಶನವಾಯಿತು. ತಮ್ಮ ಪೋಷಕರು ಅನ್ನದಾತರ ತ್ಯಾಗ ಶ್ರಮ ಗಡಿಕಾಯುವ ಸೈನಿಕರ ಸಾಧನೆ ಕಣ್ಣಿಗೆ ಕಟ್ಟುವಂತೆ ಮಕ್ಕಳಿ ಪ್ರದರ್ಶಿಸಿದ ರೂಪಕ ಪ್ರೇಕ್ಷಕರನ್ನು ಭಾವುಕರಾಗಿಸಿತು.
ನೀಗದ ಹಸುವಿನ ಸ್ವಾತಂತ್ರ್ಯ
ಒಂದೆಡೆ ಇಡೀ ತಾಲ್ಲೂಕು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಮುಳಗಿದ್ದರೆ ತಮ್ಮ ನಿತ್ಯ ಹೊಟ್ಟೆ ಹೊರೆಯಲು ದುಡಿಯುವ ವರ್ಗ ಕಾಯಕದಲ್ಲಿ ತೊಡಗಿತು. ದೇಶಕ್ಕೆ ಸ್ವಾತಂತ್ರ್ಯ ಬಂದರೂ ತಮ್ಮ ಹಸುವಿನ ಸ್ವಾತಂತ್ರ ನೀಗಿಲ್ಲ ಎಂಬಂತೆ ತಮ್ಮ ಕಾಯಕದಲ್ಲಿ ಮಗ್ನರಾಗಿದ್ದರು. ನಗರದ ಹೆದ್ದಾರಿಗಳಲ್ಲಿ ಕೆಇಬಿ ಸರ್ಕಲ್ ಮಾರುಕಟ್ಟೆ ಚೆನ್ನಬೈರೇಗೌಡ ಕ್ರೀಡಾಂಗಣದ ಸುತ್ತಮುತ್ತ ಕೊಯಮತ್ತೂರಿಂದ ಬಂದಿದ್ದ ಮಕ್ಕಳ ಹಾದಿಯಿಂದ ಮುದುಕರು ವಯಸ್ಕರು ಹೆಂಗಸರು ಎಲ್ಲರೂ ತ್ರಿವರ್ಣ ಧ್ವಜ ಮಾರಾಟ ಮಾಡಿ ನಿತ್ಯ ಕೂಲಿ ಎಣಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.