ADVERTISEMENT

ನಂದಗುಡಿ: ಬಂದೂಕು ಹಿಡಿದು ಮದ್ಯ ಸಾಲ ಕೇಳಿದ ಕುಡುಕರು!

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 8:00 IST
Last Updated 14 ಜನವರಿ 2026, 8:00 IST
ಹೊಸಕೋಟೆ ತಾಲ್ಲೂಕಿನ ಬಂಡಹಳ್ಳಿ ಗ್ರಾಮದಲ್ಲಿನ ಎಸ್‌ಎಸ್‌ವಿ ಬಾರ್‌ನಲ್ಲಿ ಜಾಹೀದ್ ವುಲ್ಲಾ ಖಾನ್ ತನ್ನ ಸ್ನೇಹಿತ ಮಹಮದ್ ಅತೀಕ್ ಜೊತೆ ನಾಡ ಬಂದೂಕು ಹಿಡಿದು ಕ್ಯಾಷಿಯರ್‌ಗೆ ಬೆದರಿಕೆ ಹಾಕುತ್ತಿರುವ ಸಿಸಿಟಿವಿ ದೃಶ್ಯ
ಹೊಸಕೋಟೆ ತಾಲ್ಲೂಕಿನ ಬಂಡಹಳ್ಳಿ ಗ್ರಾಮದಲ್ಲಿನ ಎಸ್‌ಎಸ್‌ವಿ ಬಾರ್‌ನಲ್ಲಿ ಜಾಹೀದ್ ವುಲ್ಲಾ ಖಾನ್ ತನ್ನ ಸ್ನೇಹಿತ ಮಹಮದ್ ಅತೀಕ್ ಜೊತೆ ನಾಡ ಬಂದೂಕು ಹಿಡಿದು ಕ್ಯಾಷಿಯರ್‌ಗೆ ಬೆದರಿಕೆ ಹಾಕುತ್ತಿರುವ ಸಿಸಿಟಿವಿ ದೃಶ್ಯ   

ನಂದಗುಡಿ (ಹೊಸಕೋಟೆ): ಸಾಲಕ್ಕೆ ಮದ್ಯ ನೀಡಲು ನಿರಾಕರಿಸಿದ ಬಂಡಹಳ್ಳಿಯ ಬಾರ್‌ ಕ್ಯಾಷಿಯರ್‌ಗೆ ಮದ್ಯದ ಅಮಲಿನಲ್ಲಿದ್ದ ಗ್ರಾಹಕರಿಬ್ಬರು ಭಾನುವಾರ ರಾತ್ರಿ ನಾಡ ಬಂದೂಕು ತಂದು ಗುಂಡಿಕ್ಕುವುದಾಗಿ ಬೆದರಿಸಿದ್ದಾರೆ.

ಹಣ ನೀಡದೆ ಮದ್ಯ ನೀಡುವುದಿಲ್ಲ ಎಂದ ಎಸ್‌ಎಸ್‌ವಿ ಬಾರ್‌ ಕ್ಯಾಷಿಯರ್‌ ನವೀನ್ ವಿರುದ್ಧ ಸಿಟ್ಟಾದ ಬೈಲನರಸಾಪುರ ಗ್ರಾಮದ ಜಾಹೀದ್‌ವುಲ್ಲಾ ಖಾನ್ ಹಾಗೂ ಆತನ ಸ್ನೇಹಿತ ಮಹಮ್ಮದ್ ಅತಿಕ್ ಮನೆಗೆ ಹೋಗಿ ಬಂದೂಕು ತಂದರು.

ಬಾರ್‌ ಒಳಗೆ ನುಗ್ಗಿ ಕೌಂಟರ್‌ನಲ್ಲಿ ಕುಳಿತಿದ್ದ ನವೀನ್ ಬಂದೂಕು ಗುರಿ ಇಟ್ಟು ಗುಂಡಿಕ್ಕುವುದಾಗಿ ಬೆದರಿಸಿದರು. ಬಂದೂಕು ಕಂಡು ಬೆದರಿದ ಕ್ಯಾಷಿಯರ್ ಒಳಗೆ ಒಡಿಹೋಗಿ ಬಾಗಿಲು ಹಾಕಿಕೊಂಡಿದ್ದರು.

ADVERTISEMENT

ಸ್ಥಳದಲ್ಲಿದ್ದವರು ಜಾಹೀದ್ ವುಲ್ಲಾ ಖಾನ್ ಹಾಗೂ ಆತನ ಸ್ನೇಹಿತನನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹಿಸಿದ್ದರು. ಬಾರ್‌ನಲ್ಲಿ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಬಾರ್‌ ಕ್ಯಾಷಿಯರ್‌ ನೀಡಿದ ದೂರು ಆಧರಿಸಿ ನಂದಗುಡಿ ಪೊಲೀಸರು ಆರೋಪಿಯ ಸ್ನೇಹಿತ ಮಹಮ್ಮದ್ ಅತಿಕ್ ಎಂಬಾತನನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಜಾಹೀದ್‌ವುಲ್ಲಾ ಖಾನ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಅಂದು ಬಾರ್‌ನಲ್ಲಿ ನಡೆದದ್ದು ಏನು?

ಜ.11 ರಂದು ಸಂಜೆ ಎಸ್‌ಎಸ್‌ವಿ ಬಾರ್‌ಗೆ ತೆರಳಿದ್ದ ಜಾಹೀದ್‌ವುಲ್ಲಾ ಖಾನ್ ಹಾಗೂ ಮಹಮ್ಮದ್ ಅತೀಕ್ ಸಾಲಕ್ಕೆ ಮದ್ಯ ನೀಡುವಂತೆ ಕೌಂಟರ್‌ನಲ್ಲಿದ್ದ ಕ್ಯಾಷಿಯರ್‌ನನ್ನು ಪೀಡಿಸಿದರು. ಮಾಲೀಕರ ಅನುಮತಿ ಇಲ್ಲದೆ ಸಾಲ ಕೊಡಲಾಗುದು ಎಂದು ಕ್ಯಾಷಿಯರ್ ನಿರಾಕರಿಸಿದ್ದ.

ಅದಾದ ನಂತರ ತಮ್ಮಲ್ಲಿದ್ದ ಹಣ ನೀಡಿ ಮದ್ಯ ಖರೀದಿಸಿದ ಆರೋಪಿಗಳು ಅಮಲು ಏರುತ್ತಿದ್ದಂತೆಯೇ ಕ್ಯಾಷಿಯರ್‌ ಜೊತೆ ಸಾಲಕ್ಕೆ ಮದ್ಯ ಕೊಡದ ಕಾರಣ ಮುಂದಿಟ್ಟುಕೊಂಡು ಜಗಳಕ್ಕಿಳಿದರು. ‘ನಾವು ಯಾರು ಅಂತ ತೋರಿಸ್ತೀವಿ’ ಸವಾಲು ಹಾಕಿ ಅಲ್ಲಿಂದ ಇಬ್ಬರೂ ತೆರಳಿದ್ದರು.

ಅದಾದ ಅರ್ಧ ತಾಸಿನಲ್ಲಿ ನಾಡ ಬಂದೂಕಿನೊಂದಿಗೆ ಮರಳಿದ ಇಬ್ಬರೂ ಕ್ಯಾಷಿಯರ್‌ಗೆ ಗುರಿ ಇಟ್ಟು ‘ನಮಗೆ ಸಾಲ ಕೊಡುವುದಿಲ್ವಾ? ಯಾರು ನಿನ್ನ ಮಾಲೀಕ ಕರೀಯೋ’ ಎಂದು ಕೂಗಾಡಿದ್ದಾರೆ. ಬಂದೂಕು ಕಂಡು ಬೆದರಿದ ಕ್ಯಾಷಿಯರ್ ಒಡಿಹೋಗಿ ಬಾಗಿಲು ಹಾಕಿಕೊಂಡಿದ್ದರು.  

ಬಂಡಹಳ್ಳಿ ಗ್ರಾಮದಲ್ಲಿನ ಎಸ್‌ಎಸ್‌ವಿ ಬಾರ್‌ ನಲ್ಲಿ ನಾಡ ಬಂದೂಕಿನೊಂದಿಗೆ ಮದ್ಯದ ಅಂಗಡಿಗೆ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವುದು
ಬಂಡಹಳ್ಳಿ ಬಾರ್‌ನಲ್ಲಿ ನಡೆದ ಘಟನೆ ಸಂಬಂಧ ಮಹಮ್ಮದ್ ಅತಿಕ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಜಾಹೀದ್‌ವುಲ್ಲಾ ಖಾನ್‌ಗಾಗಿ ಹುಡುಕಾಟ ನಡೆಸಿದ್ದೇವೆ.
–ಶಾಂತಾರಾಮ್‌, ಪಿಎಸ್‌ಐ ನಂದಿಗುಡಿ ಪೊಲೀಸ್‌ ಠಾಣೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.