ADVERTISEMENT

ದೇವನಹಳ್ಳಿ| ಮತದಾನದಿಂದ ಪ್ರಜಾಪ್ರಭುತ್ವ ಜೀವಂತ: ಶ್ರೀಶೈಲ ಭೀಮಸೇನ ಬಾಗಡಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 2:54 IST
Last Updated 26 ಜನವರಿ 2026, 2:54 IST
ದೇವನಹಳ್ಳಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ದೇವನಹಳ್ಳಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.   

ದೇವನಹಳ್ಳಿ: ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬ ಮತದಾರನು ಪ್ರಜ್ಞಾವಂತನಾಗಿ, ನಿರ್ಭೀತಿಯಿಂದ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಭೀಮಸೇನ ಬಾಗಡಿ ಹೇಳಿದರು.

ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಹಿರಿಯ ನಾಗರಿಕರೂ ಮತದಾನ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಮತದಾನದ ದಿನವನ್ನು ನಿರ್ಲಕ್ಷ್ಯ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. 18 ವರ್ಷ ಪೂರೈಸಿ ಮತದಾನದ ಹಕ್ಕು ಪಡೆದಿರುವ ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಹಕ್ಕನ್ನು ಬಳಸಿ ದೇಶಕ್ಕೆ ಉತ್ತಮ ನಾಯಕತ್ವ ಆಯ್ಕೆ ಮಾಡಬೇಕು ಎಂದರು.

ADVERTISEMENT

ಪ್ರಜಾಪ್ರಭುತ್ವವು ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳ ಮೇಲೆ ನಿಂತಿದೆ. ಮತದಾನ ಮೂಲಭೂತ ಹಕ್ಕಾಗಿರದಿದ್ದರೂ ಅದು ಕಾನೂನಾತ್ಮಕ ಹಕ್ಕಾಗಿದ್ದು, ಅರ್ಹತೆ ಇದ್ದರೆ ಪ್ರತಿಯೊಬ್ಬರೂ ಮತಚಲಾಯಿಸಬೇಕು ಎಂದು ತಿಳಿಸಿದರು. ಚುನಾವಣೆಯಲ್ಲಿ ಆಮಿಷ ಒಡ್ಡುವುದು ಅಪರಾಧವಾಗಿದ್ದು, ಸಮಾಜದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.

ನಿರ್ಭೀತಿಯಿಂದ ಮತಚಲಾಯಿಸುವ ಮೂಲಕ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು  ಹೇಳಿದರು. 1950ರ ಜನವರಿ 25ರಂದು ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು 2011ರಿಂದ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಮತಗಟ್ಟೆ ಮೇಲ್ವಿಚಾರಕರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಸೈಯಿದಾ ಅಯಿಷಾ ಬೋಧಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ. ಶಿವಕುಮಾರ, ಯೋಜನಾ ನಿರ್ದೇಶಕ ವಿಠಲ್ ಕಾವಳೆ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್  ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.