ADVERTISEMENT

ನೆರೆ ಪರಿಹಾರ: ಸರ್ಕಾರ ನಿರ್ಲಕ್ಷ್ಯ ದೂರು

13 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:44 IST
Last Updated 10 ಅಕ್ಟೋಬರ್ 2019, 12:44 IST
ದೇವನಹಳ್ಳಿಯಿಂದ ಗುರುವಾರ ವಿಧಾನ ಸೌಧ ಮುತ್ತಿಗೆಗೆ ತೆರಳಿದ ರೈತ ಮುಖಂಡರು
ದೇವನಹಳ್ಳಿಯಿಂದ ಗುರುವಾರ ವಿಧಾನ ಸೌಧ ಮುತ್ತಿಗೆಗೆ ತೆರಳಿದ ರೈತ ಮುಖಂಡರು   

ದೇವನಹಳ್ಳಿ: ರಾಜ್ಯದಲ್ಲಿ ಕಳೆದ ವರ್ಷದ ಅನಾವೃಷ್ಟಿ, ಪ್ರಸ್ತುತ ವರ್ಷದ ಮುಂಗಾರಿನ ಅತಿವೃಷ್ಟಿ ಪರಿಹಾರ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳುವ ಮೊದಲು ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದಿನ ವರ್ಷದ ಬರಗಾಲದಿಂದ ಚೇತರಿಸಿಕೊಳ್ಳುವ ಮೊದಲೇ ಉತ್ತರ ಕರ್ನಾಟಕ, ಕರಾವಳಿ ಮತ್ತು ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಜನಜಾನುವಾರು ಮತ್ತು ಬೆಳೆ ನಷ್ಟವಾಗಿದೆ ಎಂದರು.

ಪ್ರವಾಹದಿಂದ ಈವರೆಗೆ 4,394 ಗ್ರಾಮಗಳು ಮುಳುಗಡೆಯಾಗಿವೆ ಎಂದು ಸರ್ಕಾರದ ಅಂಕಿ ಅಂಶಗಳೇ ದೃಢಪಡಿಸಿವೆ. ಈ ಜಮೀನುಗಳಲ್ಲಿ ಮತ್ತೆ ಕೃಷಿ ಚಟುವಟಿಕೆ ಆರಂಭಿಸಲು ಕನಿಷ್ಠ 3 ರಿಂದ 4 ವರ್ಷಗಳು ಬೇಕು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮುಖ್ಯಮಂತ್ರಿ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುತ್ತಾರೆ, ಕೇಂದ್ರ ಸರ್ಕಾರ ₹ 1,200 ಕೋಟಿ ಬಿಡಿಗಾಸು ನೀಡಿ ಪರಿಹಾರ ನೀಡಿದ್ದೇವೆ ಎಂದು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಜ್ಯದಲ್ಲಿ ಬರಗಾಲ ನಿರಂತರವಾಗಿ ಮುಂದುವರಿಯುತ್ತಿದೆ, ಸರ್ಕಾರ ಮಾತ್ರ ಶಾಶ್ವತವಾಗಿ ಬರಗಾಲ ಹೋಗಲಾಡಿಸುವ ಪ್ರಯತ್ನ ಮಾಡುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿರುವ ರೈತರಿಗೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಅಪರಾಧ ಪ್ರಕರಣ ದಾಖಲಿಸಲು ನೋಟಿಸ್ ನೀಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಗಾರೆ ರವಿಕುಮಾರ್ ಮಾತನಾಡಿ, ನೆರೆ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ₹ 10 ಲಕ್ಷಕ್ಕಿಂತ ಕಡಿಮೆ ಇಲ್ಲದೆ ಗುಣಮಟ್ಟದ ಮನೆ ನಿರ್ಮಾಣ ಮಾಡಿ ನೀಡಬೇಕು, ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಪ್ರತಿ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು, ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಒಟ್ಟು 13 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲಾಗುತ್ತಿದೆ ಎಂದು ಹೇಳಿದರು.

ರೈತ ಸಂಘ ತಾಲ್ಲೂಕು ಘಟಕ ಗೌರವಾಧ್ಯಕ್ಷ ಹನುಮಂತರಾಯಪ್ಪ, ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷರುಗಳಾದ ಹರೀಶ್ ವೆಂಕಟೇಶ್, ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ಕಾರ್ಯದರ್ಶಿಗಳಾದ ಕೇಶವಮೂರ್ತಿ, ರವಿತೇಜ, ನಾಗರಾಜು, ಹಸಿರು ಸೇನೆ ಅಧ್ಯಕ್ಷರಾದ ಮಂಡಿಬೆಲೆ ನಾರಾಯಣ ಸ್ವಾಮಿ, ವಿಜಯಪುರ ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.