ADVERTISEMENT

ದೊಡ್ಡಬಳ್ಳಾಪುರ: ಬದುಕು ಕಟ್ಟಿದ ಪತ್ರಿಕೆ ವಿತರಣೆ

ವಿತರಕರ- ಓದುಗರ ದಿನ, ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 2:07 IST
Last Updated 7 ಸೆಪ್ಟೆಂಬರ್ 2020, 2:07 IST
ದಿನ ಪತ್ರಿಕೆ ವಿತರಕರನ್ನು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಭಿನಂದಿಸಲಾಯಿತು
ದಿನ ಪತ್ರಿಕೆ ವಿತರಕರನ್ನು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಪತ್ರಿಕಾ ವಿತರಕರ ಹಾಗೂ ವಿಶ್ವ ಪುಸ್ತಕ ಓದುಗರ ದಿನಾಚರಣೆ ಭಾನುವಾರ ನಡೆಯಿತು.

ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ವಿ.ವಿ.ಸಂತೋಷ್, ‘ಪುಸ್ತಕಗಳು ನಮ್ಮ ಸಂಸ್ಕೃತಿ, ವಿಚಾರಗಳನ್ನು ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ಸಾಗಿಸುವ ವಾಹಕಗಳಂತೆ ಕೆಲಸ ಮಾಡುತ್ತಿವೆ. ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿರುವ, ಸಂಶೋಧನೆಗಳನ್ನು ಮಾಡಿರುವ ಎಲ್ಲಾ ಸಾಧಕರ ಯಶಸ್ಸಿನ ಗುಟ್ಟು ಉತ್ತಮ ಗ್ರಂಥಗಳ ಅಧ್ಯಯನವೇ ಮೂಲವಾಗಿರುತ್ತದೆ. ನಾಲ್ಕು ಜನರ ಮುಂದೆ ಸರಿಸಮಾನವಾಗಿ ನಿಂತು ಮಾತನಾಡುವ ಧೈರ್ಯವನ್ನು ನಮಗೆ ತಂದುಕೊಡುವುದೇ ಪುಸ್ತಕಗಳ ಅಧ್ಯಯನ’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಹಾದೇವ್‌ ಮಾತನಾಡಿ, ‘ಭಾಷೆಯ ಬೆಳವಣಿಗೆಯಲ್ಲಿ ದಿನ ಪತ್ರಿಕೆಗಳ ಪಾತ್ರವು ಮುಖ್ಯವಾಗಿದೆ. ಹಾಗೆಯೇ ವಿದ್ಯಾರ್ಥಿಗಳ ಜ್ಞಾನವೃದ್ಧಿಯಲ್ಲೂ
ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ದಿನ ಪತ್ರಿಕೆಗಳನ್ನು ಸಕಾಲಕ್ಕೆ ಮನೆ ಬಾಗಿಲಿಗೆ ತಲುಪಿಸುವ ವಿತರಕರ ಸೇವೆ ಸ್ಮರಣೀಯ.
ಪತ್ರಿಕೆಗಳ ವಿತರಣೆ ಹಲವಾರು ಜನ ವಿದ್ಯಾರ್ಥಿಗಳಿಗೆ ಆರ್ಥಿಕ ಆಸರೆಯಾಗಿದೆ. ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಂತಹವರು ಸಹ ದಿನ ಪತ್ರಿಕೆಗಳನ್ನು ವಿತರಣೆ ಮಾಡುವ ಮೂಲಕವೇ ಬದುಕನ್ನು ರೂಪಿಸಿಕೊಂಡವರು. ಮಳೆ, ಚಳಿಯನ್ನು ಲೆಕ್ಕಿಸದೆ ಬೆಳಿಗ್ಗೆಯೇ ಪತ್ರಿಕೆಗಳನ್ನು ಮನೆಗೆ ತಲುಪಿಸುವ ವಿತರಕರ ಕೆಲಸವು ಗೌರವಯುತವಾದದ್ದು. ಸರ್ಕಾರ ವಿತರಕರಿಗೆ ಹಲವಾರು ಸೌಲಭ್ಯಗಳನ್ನು ಘೋಷಣೆ ಮಾಡಿತ್ತೆ ವಿನಃ ವಾಸ್ತವದಲ್ಲಿ ಯಾವುದೂ ಜಾರಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ದಿನ ಪತ್ರಿಕೆ ವಿತರಕರಾದ ರಾಮನಾಥ್, ರವೀಂದ್ರ, ಉಮಾಕಾಂತ್,ರಮೇಶ್ ಶೆಣೈ ಅವರನ್ನು ಅಭಿನಂದಿಸಲಾಯಿತು. ತಾಲ್ಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ವೇದಿಕೆ ತಾಲ್ಲೂಕು ಅಧ್ಯಕ್ಷೆ ಹಸನ್‌ಘಟ್ಟ ಲೀಲಾವತಿ, ಸಾಹಿತ್ಯ ಪರಿಷತ್‌ ತಾಲ್ಲೂಕು ಕಾರ್ಯಾಧ್ಯಕ್ಷ
ತರಿದಾಳ್‌ಶ್ರೀನಿವಾಸ್, ಪದಾಧಿಕಾರಿಗಳಾದ ಮಂಜುನಾಥ್, ದೇವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.