ADVERTISEMENT

‘ಎತ್ತಿನಹೊಳೆ– ನೇತ್ರಾವತಿ ನದಿಗೂ ಸಂಬಂಧವಿಲ್ಲ’

ಮಳೆನೀರು ಹರಿದು ವ್ಯರ್ಥವಾಗುವುದನ್ನು ತಡಯಲು ಯೋಜನೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:05 IST
Last Updated 19 ಮೇ 2019, 14:05 IST
ರಾಮಚಂದ್ರಪ್ಪ
ರಾಮಚಂದ್ರಪ್ಪ   

ವಿಜಯಪುರ: ‘ಎತ್ತಿನಹೊಳೆ ಯೋಜನೆಯಿಂದ ಬಯಲು ಸೀಮೆ ಭಾಗದಲ್ಲಿನ ಕೆರೆಗಳಿಗೆ ನೀರು ಹರಿಸುವುದು ಖಚಿತ. ಈ ಬಗ್ಗೆ ಸಂಶಯ ಬೇಡ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರ ₹ 13 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ. ಕಾಮಗಾರಿಯನ್ನು ತರಾತುರಿಯಲ್ಲಿ ಮಾಡಿದರೆ, ಗುಣಮಟ್ಟವಿಲ್ಲದೆ ಅನುದಾನ ದುರುಪಯೋಗವಾಗುವ ಸಂಭವ ಇರುತ್ತದೆ. ಆದ್ದರಿಂದ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಗುಣಮಟ್ಟದ ಕಾಮಗಾರಿ ಹಲವು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಸಂಸದ ವೀರಪ್ಪ ಮೊಯಿಲಿ ಅವರು ಸಾಕಷ್ಟು ಶ್ರಮಪಟ್ಟು ಯೋಜನೆಗೆ ಚಾಲನೆ ಕೊಡಿಸಿದ್ದಾರೆ’ ಎಂದರು.

‘ಚುನಾವಣೆಗೂ ಮೊದಲು ನಾವು ಅನೇಕ ಬಾರಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಅಲ್ಲಿನ ತಂತ್ರಜ್ಞರಿಂದ ಮಾಹಿತಿಯನ್ನೂ ಪಡೆದುಕೊಂಡಿದ್ದೇವೆ. ಯೋಜನೆ ಕುರಿತು ರಾಜಕೀಯ ಲಾಭ ಮಾಡಿಕೊಳ್ಳುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

‘ಮಳೆಗಾಲದಲ್ಲಿ ಸಕಲೇಶ್ವರ ಭಾಗದಲ್ಲಿರುವ ಹೊಂಗೆ ಹೊಳ್ಳದ ಸಮೀಪದಲ್ಲಿ ವಾರ್ಷಿಕ ಸುಮಾರು 200 ಸೆಂ.ಮೀ ಮಳೆಯಾಗುತ್ತದೆ. ಈ ನೀರೆಲ್ಲವೂ ಸಮುದ್ರಕ್ಕೆ ಹರಿದು ಹೋಗುತ್ತದೆ. ಮಳೆ ನೀರು ಶೇಖರಣೆಯಾಗುವ ಸ್ಥಳದಲ್ಲೇ ಅಣೆಕಟ್ಟೆ ನಿರ್ಮಿಸಿ, ನೀರು ಹರಿಯುವ ಸಮಯದಲ್ಲಿ ಯಂತ್ರಗಳ ಮೂಲಕ ಪಂಪ್ ಮಾಡಿ, ನಮ್ಮ ಭಾಗದ ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದೆ’ ಎಂದು ಮಾಹಿತಿ ನೀಡಿದರು.

‘ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಬಂಡೆಯಲ್ಲೇ 20 ಕಿ.ಮೀ.ಗೂ ಹೆಚ್ಚು ಕೊರೆದಿದ್ದಾರೆ. ಕಾಮಗಾರಿಗೆ ಬೇಕಾಗಿರುವ ಪರಿಕರಗಳನ್ನು ಅಲ್ಲೇ ತಯಾರಿಸಲಾಗುತ್ತಿದೆ. ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಯಂತ್ರೋಪಕರಣಗಳ ಜೋಡಣೆಯಾಗಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ’ ಎಂದರು.

‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಬರೆದಿರುವ ಪತ್ರಕ್ಕೂ ಎತ್ತಿನಹೊಳೆ ಯೋಜನೆಗೂ ಸಂಬಂಧವಿಲ್ಲ. ಯೋಜನೆಗೆ ಬಳಕೆ ಮಾಡುವ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹಾಗಾಗಿಯೇ ಈ ಯೋಜನೆ ಕೈಗೊಳ್ಳಲಾಗಿದೆ. ನಮಗೆ ಬರುವ ನೀರಿಗೂ, ಧರ್ಮಸ್ಥಳದಲ್ಲಿ ಹರಿಯುವ ನೇತ್ರಾವತಿ ನದಿಗೂ ಸಂಬಂಧವೇ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.