ADVERTISEMENT

ಬರ ಪರಿಹಾರ, ಪ್ರೋತ್ಸಾಹಧನವೂ ಇಲ್ಲ

ಚನ್ನರಾಯಪಟ್ಟಣ ಹೋಬಳಿ: ಮಳೆ ಹಿನ್ನಡೆ, ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 19:45 IST
Last Updated 26 ಆಗಸ್ಟ್ 2019, 19:45 IST
ಚನ್ನರಾಯಪಟ್ಟಣ ಹೋಬಳಿ ಐಬಸಾಪುರದ ಬಳಿ ರೈತರೊಬ್ಬರು ಗುಂಟೆ ಹೊಡೆಯುತ್ತಿದ್ದರೆ, ಇಬ್ಬರು ರೈತರು ಮಳೆಯ ನಿರೀಕ್ಷೆಯಲ್ಲಿ ಬೆಳೆ ನೋಡುತ್ತಾ ಕುಳಿತಿದ್ದಾರೆ
ಚನ್ನರಾಯಪಟ್ಟಣ ಹೋಬಳಿ ಐಬಸಾಪುರದ ಬಳಿ ರೈತರೊಬ್ಬರು ಗುಂಟೆ ಹೊಡೆಯುತ್ತಿದ್ದರೆ, ಇಬ್ಬರು ರೈತರು ಮಳೆಯ ನಿರೀಕ್ಷೆಯಲ್ಲಿ ಬೆಳೆ ನೋಡುತ್ತಾ ಕುಳಿತಿದ್ದಾರೆ   

ವಿಜಯಪುರ:ಚನ್ನರಾಯಪಟ್ಟಣ ಹೋಬಳಿ ಐಬಸಾಪುರ ಸೇರಿದಂತೆ ಸುತ್ತಮುತ್ತಲಿನಲ್ಲಿ ಹಳ್ಳಿಗಳಲ್ಲಿ ಹದಿನೈದು ದಿನಗಳಿಂದ ಒಂದು ಹನಿ ಮಳೆ ಬಿದ್ದಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

‘ಕಳೆದ ವರ್ಷ 2 ಎಕರೆ ಭೂಮಿಯಲ್ಲಿ 20 ಕ್ವಿಂಟಲ್ ರಾಗಿ ಬೆಳೆದು ಈ ಬಾರಿ 5 ಕ್ವಿಂಟಲ್‌ನಷ್ಟು ರಾಗಿಯನ್ನು ಬಿತ್ತನೆಗಾಗಿ ರೈತರಿಗೆ ನೀಡಿದ್ದೇನೆ. ಕೃಷಿ ಇಲಾಖೆಯವರು 5 ಅಡಿಗಳಷ್ಟು ಜಾಗದಲ್ಲಿನ ರಾಗಿಯನ್ನು ಕಟಾವು ಮಾಡಿಕೊಂಡು ಕೃಷಿ ಮೇಳ ಪ್ರದರ್ಶನಕ್ಕೆ ತೆಗೆದುಕೊಂಡು ಹೋಗಿದ್ದರು. ನಿಮಗೆ ಇಲಾಖೆಯಿಂದ ಬಹುಮಾನ ಬರುತ್ತದೆ ಎಂದು ಹೇಳಿದ್ದರು. ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿರುವ ಕಾರಣ ಬಹುಮಾನವೂ ಬರಲಿಲ್ಲ. ಬರಪರಿಹಾರದ ಹಣವೂ ಬರಲಿಲ್ಲ. ಈ ಬಾರಿಯೂ ಒಳ್ಳೆ ಬೆಳೆ ಬೆಳೆಯೋಣವೆಂದು ರೂಪಿಸಿದ್ದ ಯೋಜನೆಯೂ ಫಲಿಸುತ್ತಿಲ್ಲ’ ಎಂದು ಐಬಸಾಪುರದ ರೈತ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ರೈತ ವೀರಣ್ಣ ಮಾತನಾಡಿ, ‘ಎರಡು ಸಾರಿ ಉಳುಮೆ ಮಾಡಿದ್ದೇವೆ. ಬಿತ್ತನೆಯನ್ನೂ ಎರಡು ಬಾರಿ ಹಾಕಿದ್ದೇವೆ. ಎರಡನೇ ಬಾರಿಗೆ ಪೈರುಗಳು ಬೆಳೆದಿವೆ. ಈಗ ಗುಂಟೆ ಹೊಡೆಯುತ್ತಿದ್ದೇವೆ. ಇಲ್ಲವಾದರೆ ಪೈರಿಗೆ ಸೀಡೆ ರೋಗ ಬೀಳುತ್ತದೆ. ಗುಂಟೆ ಹೊಡೆದ ನಂತರ ಮಳೆ ಬಂದರೆ ರಾಗಿ ಪೈರು ಬೇರು ಬಿಟ್ಟುಕೊಳ್ಳುತ್ತದೆ. ಇಲ್ಲವಾದರೆ ಇದೂ ಒಣಗಿ ಹೋಗುತ್ತದೆ. ಈಗ ಮಳೆ ಬೀಳುವ ಸಮಯ ಆದರೂ ಗಾಳಿ ಬೀಸಲು ಆರಂಭವಾಗಿದೆ. ಮಳೆ ಬರುತ್ತೋ ಇಲ್ಲವೋ ಎನ್ನುವ ಆತಂಕ ಶುರುವಾಗಿದೆ. ಗಾಳಿ ಇಲ್ಲವಾಗಿದ್ದರೆ ಇವತ್ತಲ್ಲ ನಾಳೆ ಮಳೆ ಬರುತ್ತೆ ಎನ್ನುವ ನಂಬಿಕೆ ಇರುತ್ತಿತ್ತು. 15 ಸಾವಿರದಷ್ಟು ಹಣ ಸಾಲ ಮಾಡಿ ಬಿತ್ತನೆ ಹಾಕಿದ್ದೇನೆ. ಒಂದು ವೇಳೆ ಬೆಳೆ ಚೆನ್ನಾಗಿ ಆದರೆ, ಸಾಲ ತೀರಿಸಿಕೊಳ್ಳಬಹುದು ಆಗಲಿಲ್ಲವೆಂದಾದರೆ ಸಾಲದ ಸುಳಿಗೆ ಸಿಲುಕಬೇಕು’ ಎಂದರು.

ADVERTISEMENT

ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ‘ಬರಗಾಲ ಪೀಡಿತ ಪ್ರದೇಶಕ್ಕೆ ಒಳಗಾಗಿರುವ ತಾಲ್ಲೂಕಿನ ರೈತರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದರೂ ಇದುವರೆಗೂ ರೈತರಿಗೆ ಹಣ ಬಿಡುಗಡೆಯಾಗಿಲ್ಲ. ಪದೇ ಪದೇ ರೈತರು ಬಂದು ನಮ್ಮ ಇಲಾಖೆಯಲ್ಲಿ ಕೇಳುತ್ತಿರುತ್ತಾರೆ. ಸರ್ಕಾರದಿಂದ ಬಿಡುಗಡೆಯಾಗದಿದ್ದರೆ ನಾವೇನು ಮಾಡಲಿಕ್ಕೆ ಸಾಧ್ಯ’? ಎಂದರು.

ವಿಜಯಪುರ ಕೃಷಿ ಅಧಿಕಾರಿ ಬೇವಿನಕಟ್ಟಿ ಮಾತನಾಡಿ, ‘ಕಳೆದ ವರ್ಷದಲ್ಲಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ನಂತರ ಶೇ 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಷ್ಟು ರೈತರ ಬೆಳೆ ನಷ್ಟವಾಗಿದೆ ಎನ್ನುವ ಕುರಿತು ವರದಿ ತಯಾರಿಸಿ ಸಲ್ಲಿಸುವಂತೆ ತಿಳಿಸಿದ್ದರು. ತಾಲ್ಲೂಕಿನ ಎಲ್ಲಾ ಹೋಬಳಿಗಳಿಂದಲೂ ಅಧಿಕಾರಿಗಳು ವರದಿ ಸಲ್ಲಿಸಿದ್ದೇವೆ. ಇದುವರೆಗೂ ಪರಿಹಾರ ಬಿಡುಗಡೆಯಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.