ADVERTISEMENT

ದೇಶದಿಂದ ಯಾರನ್ನೂ ಹೊರ ಹಾಕುವುದಿಲ್ಲ: ವಿನಯ್ ಬಿದರಿ

ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಪೌರತ್ವ ಕಾಯ್ದೆ ಬೆಂಬಲಿಸಿ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 15:36 IST
Last Updated 6 ಜನವರಿ 2020, 15:36 IST
ಪೌರತ್ವ ಕಾಯಿದೆ ಬೆಂಬಲಿಸಿ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ರ್ಯಾಲಿ ನಡೆಸಲಾಯಿತು
ಪೌರತ್ವ ಕಾಯಿದೆ ಬೆಂಬಲಿಸಿ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ರ್ಯಾಲಿ ನಡೆಸಲಾಯಿತು   

ದೊಡ್ಡಬಳ್ಳಾಪುರ: ಕಾಶ್ಮೀರದಲ್ಲಿ ಮಾತ್ರ ಕಲ್ಲು ತೂರಾಟದ ದೃಶ್ಯಗಳನ್ನು ನೋಡುತಿದ್ದೆವು. ಈಗ ನಮ್ಮ ಮನೆ ಬಾಗಿನಲ್ಲೇ ಕಲ್ಲು ತೂರಾಟ ನಡೆಯುತ್ತಿವೆ. ಭಾರತ ಮನುಷ್ಯತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ದೇಶ. ಆದರೆ ಪಾಕಿಸ್ತಾನ, ಬಾಂಗ್ಲದೇಶ ಇಸ್ಲಾಂ ಧರ್ಮದ ಮೇಲೆ ನಿರ್ಮಾಣವಾಗಿವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ರಾಜ್ಯ ಸಂಚಾಲಕ ವಿನಯ್ಬಿದರಿ ಹೇಳಿದರು.

ಅವರು ಸೋಮವಾರ ನಗರದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದರು.

ಕೆಲ ರಾಜಕೀಯ ಪಕ್ಷಗಳು, ನಗರ ನಕ್ಸಲರು, ಸ್ವಯಂ ಪ್ರೇರಿತ ಬುದ್ಧಿಜೀವಿಗಳು ತಮ್ಮ ಸ್ವಾರ್ಥಕ್ಕೆ ಕುತಂತ್ರದಿಂದ ಪೌರತ್ವ ಕಾಯ್ದೆಯನ್ನು ಅಲ್ಪಸಂಖ್ಯಾತರಿಗೆ ತಪ್ಪಾಗಿ ಅರ್ಥೈಸುವ ಮೂಲಕ ಗಲಭೆಗೆ ಪ್ರಚೋದಿಸುತ್ತಿದ್ದಾರೆ. ಕಾಯ್ದೆ ದೇಶವನ್ನು ಸದೃಢಗೊಳಿಸುವ ಕಾಯ್ದೆಯೇ ಹೊರತು, ಭಾರತೀಯ ಮುಸ್ಲಿಮರನ್ನು ಹೊರಹಾಕುವುದಲ್ಲ ಎಂದರು.

ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸಿಎಎ ಅಂದರೆ ಏನು ಎನ್ನುವುದನ್ನು ಮುಸ್ಲಿಂ ಮುಖಂಡರಿಗೆ ಅರ್ಥವಾಗುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂದರು

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಕಾಯ್ದೆ ನೆಹರು ಕಾಲದಿಂದಲೂ ಇದೆ. ಪೌರತ್ವ ಪಡೆಯಲು 14 ವರ್ಷ ಕಾಯಬೇಕಿತ್ತು. ಇದನ್ನು ಈಗ 14 ದಿನಗಳಿಗೆ ಇಳಿಸಲಾಗಿದೆ. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಸಭೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಜೆ.ನರಸಿಂಹಸ್ವಾಮಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್.ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಶಿವಶಂಕರ್, ರಾಮಕೃಷ್ಣಯ್ಯ, ಬಿಜೆಪಿ ನಗರ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ನಗರ ಕಾರ್ಯದರ್ಶಿ ವಿನಾಯಕನಗರ ಕೃಷ್ಣಮೂರ್ತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದರೆಡ್ಡಿ, ರಾಜಘಟ್ಟ ಕಾಂತರಾಜ್, ಮುಖಂಡರಾದ ಸಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಗೌಡ, ಬಿ.ಸಿ.ನಾರಾಯಣಸ್ವಾಮಿ, ಟಿ.ವಿ.ಲಕ್ಷ್ಮೀನಾರಾಯಣ್‌, ಕೆ.ಬಿ.ಮುದ್ದಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಗಿರಿಜಾ, ಜಿಲ್ಲಾ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣಕುಮಾರ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವು ಇದ್ದರು.

ರ‍್ಯಾಲಿಯಲ್ಲಿ ನೂರಾರು ಜನ ರಾಷ್ಟ್ರ ಧ್ವಜ,ನಾಡಧ್ವಜ ಹಾಗೂ ಭಗವತ್ ಧ್ವಜ ಹಿಡಿದು ಭಾಗವಹಿಸಿದ್ದರು. ಡಿವೈಎಸ್‌ಪಿ ಟಿ.ರಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ರಾಘವ.ಎಸ್ ಗೌಡ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.