ADVERTISEMENT

ಸೂಲಿಬೆಲೆ: ಪ್ಲಾಸ್ಟಿಕ್ ಬಳಕೆಗೆ ಬೀಳದ ಕಡಿವಾಣ

ಗ್ರಾಮೀಣ ಪರಿಸರವನ್ನು ಆವರಿಸಿದ ಪ್ಲಾಸ್ಟಿಕ್ ಜಲಮೂಲ ಕಲುಷಿತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:44 IST
Last Updated 19 ಏಪ್ರಿಲ್ 2021, 4:44 IST
ಹೊಸಕೋಟೆ ನಗರದ ನಾಲಾಗಲ್ಲಿಯ ನಾಲೆಯಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ತ್ಯಾಜ್ಯದ ರಾಶಿ
ಹೊಸಕೋಟೆ ನಗರದ ನಾಲಾಗಲ್ಲಿಯ ನಾಲೆಯಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ತ್ಯಾಜ್ಯದ ರಾಶಿ   

ಸೂಲಿಬೆಲೆ: ಪ್ಲಾಸ್ಟಿಕ್ ಬಳಕೆಗೆ ಸರ್ಕಾರ ನಿಷೇಧ ಹೇರಿ ಹಲವು ವರ್ಷಗಳು ಕಳೆದಿವೆ. ಆದರೂ ಪ್ಲಾಸ್ಟಿಕ್ ಬ್ಯಾಗ್, ಪೇಪರ್ ಗಳ ನಿಷೇಧ ಕೇವಲ ಕಾನೂನಿನ ಕಡತಕ್ಕೆ ಸೀಮಿತವಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪ್ಲಾಸ್ಟಿಕ್ ಬಳಕೆ ಮೇಲೆ ಕಡಿವಾಣ ಬೀಳದೆ, ಮುಕ್ತವಾಗಿ ಪ್ಲಾಸ್ಟಿಕ್ ನಿಂದ ತಯಾರಾದ ವಸ್ತುಗಳು ನಗರ, ಪಟ್ಟಣಗಳಲ್ಲಿ ರಾರಾಜಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲ್ಲೂಕು ಕೇಂದ್ರ ಬೆಂಗಳೂರು ಮಹಾನಗರದ ಅತಿ ಸಮೀಪವಿದ್ದು ತುಂಬ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. 2011 ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ ಸುಮಾರು 57 ಸಾವಿರದೆ. ತಾಲ್ಲೂಕಿನ ಒಟ್ಟು ಜನಸಂಖ್ಯೆ ಸುಮಾರು 2.7 ಲಕ್ಷವಿದೆ. ಪ್ರಸ್ತುತ ಸುಮಾರು 3 ಲಕ್ಷ ಜನಸಂಖ್ಯೆ ದಾಟಿರುವ ತಾಲ್ಲೂಕಿನಲ್ಲಿ ಕಸ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿಷೇಧದ ವಿಷಯದಲ್ಲಿ ಸ್ಥಳೀಯ ಆಡಳಿತಗಳು ಸಂಪೂರ್ಣ ವಿಫಲವಾಗಿವೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹೊಸಕೋಟೆ ತಾಲ್ಲೂಕಿನಲ್ಲಿ 5 ಹೋಬಳಿ ಕೇಂದ್ರಗಳಿವೆ. ಸೂಲಿಬೆಲೆ ಮತ್ತು ನಂದಗುಡಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಾಗಿವೆ. ತಾಲ್ಲೂಕು ಕೇಂದ್ರದಂತೆ ಹೋಬಳಿ ಕೇಂದ್ರಗಳಲ್ಲಿಯೂ ಕಸದ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿಷೇಧ ಮಾಡುವಲ್ಲಿ ಸ್ಥಳೀಯ ಆಡಳಿತ ಜಾಣ ಕುರುಡು ಪ್ರದರ್ಶಿಸುತ್ತಿದೆ.

ADVERTISEMENT

ಹಳ್ಳಿಗಳಿಗೆ ಲಗ್ಗೆಯಿಟ್ಟ ಪ್ಲಾಸ್ಟಿಕ್: ಪ್ಲಾಸ್ಟಿಕ್ ಬಳಕೆ ಮಾಡದಿರುವ ಮನೆಗಳೇ ಇಲ್ಲದಂತಾಗಿದೆ ಇಂದಿನ ಜನ ಜೀವನದಲ್ಲಿ. ನಗರ ಪ್ರದೇಶಗಳಿಗೆ ತಲೆನೋವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯದ ಭೂತ ಹಳ್ಳಿಗಳಿಗೆ ಲಗ್ಗೆಯಿಟ್ಟು ತನ್ನ ಕಪಿಮುಷ್ಠಿಯಲ್ಲಿ ಗ್ರಾಮೀಣ ಪರಿಸರವನ್ನು ಆವರಿಸಿಕೊಂಡಿದೆ. ಸಭೆ ಸಮಾರಂಭಗಳಲ್ಲಿ ಮತ್ತು ದಿನ ನಿತ್ಯ ಮನೆಗಳಲ್ಲಿ ಬಳಸುವ ಪ್ಲಾಸ್ಟಿಕ್ ತ್ಯಾಜ್ಯ ಕೆರೆ ಒಡಲು ಸೇರಿ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಪ್ಲಾಸ್ಟಿಕ್ ತ್ಯಜಿಸಿ ಸ್ವಚ್ಛ ಪರಿಸರ ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎನ್ನುತ್ತಾರೆ ತೆನೆಯೂರು ವಾಸಿ ಅಭಿಲಾಷ್.

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಪರಿಸರಕ್ಕೆ ಮಾರಕ: ಹೊಸಕೋಟೆ ನಗರದಲ್ಲಿ, ನಗರಸಭೆಯ ಸಿಬ್ಬಂದಿ ಹಸಿ ಕಸವನ್ನು ಮನೆಗಳಿಂದ ವಿಲೇವಾರಿ ಮಾಡುತ್ತಾರೆ. ಆದರೆ ಪ್ಲಾಸ್ಟಿಕ್ ಕವರ್ ಮತ್ತಿತರ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡದಿರುವುದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಕವರ್ ಗಳನ್ನು ನಗರದ ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೆ, ನಗರಸಭೆ ಸಿಬ್ಬಂದಿಯವರು ಬೆಂಕಿಯಿಟ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುತ್ತಾರೆ. ಪ್ಲಾಸ್ಟಿಕ್ ಕವರ್ ಗಳನ್ನು ನಿಷೇಧಿಸಲು ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು ಪರಿಸರ ಪ್ರೇಮಿ ಸಿ.ಎಸ್.ನಾಗಭೂಷಣ.

ಪ್ಲಾಸ್ಟಿಕ್ ಕವರ್ ನಿಷೇಧದ ಬಗ್ಗೆ ನಗರದಲ್ಲಿ ಪ್ರಚಾರ ಮಾಡಿಸಲಾಗುತ್ತದೆ. ವಾರಕ್ಕೊಮ್ಮೆ ನಗರಸಭೆ ಅಧಿಕಾರಿಗಳು ನಗರದಲ್ಲಿ ದಾಳಿ ಮಾಡಿ, ಪ್ಲಾಸ್ಟಿಕ್ ಬಳಸುವುದು ಕಂಡು ಬಂದರೆ ದಂಡ ಹಾಕುತ್ತಾರೆ-ಕೆ.ಪರಮೇಶ್, ಪೌರಾಯುಕ್ತರು, ಹೊಸಕೋಟೆ ನಗರಸಭೆ.

ವ್ಯತಿರಿಕ್ತ ಪರಿಣಾಮ
ಪ್ಲಾಸ್ಟಿಕ್ ಪೇಪರ್‌ಗಳನ್ನು ಸುಡುವುದರಿಂದ ಮತ್ತು ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊಸಕೋಟೆ ನಗರ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್‌ ಬಳಕೆ ಹಾಗೂ ಸುಡುವುದನ್ನು ಮೊದಲು ನಿಲ್ಲಿಸಬೇಕು ಎನ್ನುತ್ತಾರೆ ಪರಿಸರ ಪ್ರೇಮಿ ಸಿ.ಎಸ್.ನಾಗಭೂಷಣ.

ಕ್ಯಾನ್ಸರ್‌ ಕಾರಣ
ಪರಿಸರದಲ್ಲಿ ಕರಗಲು 500 ವರ್ಷಗಳು ತೆಗೆದುಕೊಳ್ಳುವ ಪ್ಲಾಸ್ಟಿಕ್, ಮನುಷ್ಯರಿಗೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಮತ್ತು ಪ್ರಾಣಿಗಳಿಗೆ ಹಾನಿಯುಂಟು ಮಾಡುತ್ತದೆ. ಗ್ರಾಮೀಣ ಜನರಲ್ಲಿ ಪ್ಲಾಸ್ಟಿಕ್ ಉಂಟು ಮಾಡುವ ಹಾನಿಯ ಬಗ್ಗೆ ಸ್ಥಳೀಯ ಸಂಸ್ಥೆಗಳು ಅರಿವು ಮೂಡಿಸಬೇಕು ಮತ್ತು ನಿಷೇಧಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಚಂದನ.ಸಿ.ಎ, ಕಾಲೇಜು ವಿದ್ಯಾರ್ಥಿನಿ ಸೂಲಿಬೆಲೆ.

ಉತ್ಪಾದನೆ ನಿಷೇಧಿಸಿ
ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ಬಿಸಿಯಾದಾಗ ವಿಷಕಾರಿ ಅನಿಲ ಸೂಸುತ್ತದೆ ಇದರಿಂದ ಕ್ಯಾನ್ಸರ್ ಸೃಷ್ಟಿಯಾಗುತ್ತದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು ಪ್ಲಾಸ್ಟಿಕ್. ಇದರ ಬಳಕೆಯನ್ನು ನಿರ್ಬಂಧಿಸುವ ಜೊತೆಗೆ ಪ್ಲಾಸ್ಟಕ್‌ ಕವರ್ ಉತ್ಪಾದನೆಯನ್ನು ನಿಷೇಧಿಸಬೇಕು ಎನ್ನುತ್ತಾರೆ ರವಿಸಿರಿ ಜಡಿಗೇನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.