ADVERTISEMENT

ನರೇಗಾ ಹೆಸರು ಬದಲು: ಜಿಲ್ಲೆಯಿಂದಲೇ ಹೋರಾಟ ಆರಂಭ ಎಂದ ಕೆ.ಎಚ್. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 4:39 IST
Last Updated 12 ಜನವರಿ 2026, 4:39 IST
ದೇವನಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ನರೇಗಾ ಮರುನಾಮಕರಣ ಕ್ರಮ ಖಂಡಿಸಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿದರು
ದೇವನಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ನರೇಗಾ ಮರುನಾಮಕರಣ ಕ್ರಮ ಖಂಡಿಸಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿದರು   

ದೇವನಹಳ್ಳಿ: ನರೇಗಾ ಹೆಸರು ಮರುನಾಮಕರಣದ ವಿರುದ್ಧ ಕಾನೂನು ಹೋರಾಟ ನಡೆಸಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ 5 ಕಿ.ಮೀ ಪಾದಯಾತ್ರೆ ನಡೆಸಿ ಸುಮಾರು 10 ಸಾವಿರ ಜನರನ್ನು ಸೇರಿಸಲಾಗುವುದು. ಈ ಹೋರಾಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆರಂಭವಾಗಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿಸೆಂಬರ್ 17ರಂದು ಕೇಂದ್ರ ಸರ್ಕಾರ ನರೇಗಾ ಹೆಸರನ್ನು ಬದಲಿಸಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಮಾಡಿದ ಅವಮಾನ. ಬಡವರು, ಭೂಮಿರಹಿತರು ಹಾಗೂ ಕೂಲಿಕಾರ್ಮಿಕರಿಗೆ ಕೆಲಸ ನೀಡಿದ ಈ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ನರೇಗಾ ಮೂಲಕ ಕೆರೆ, ಬದುಗಳು, ಚೆಕ್‌ಡ್ಯಾಂಗಳು, ನೀರು ಹಿಂಗುವ ಗುಂಡಿಗಳ ನಿರ್ಮಾಣ ಸೇರಿದಂತೆ ಗ್ರಾಮೀಣ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ, ಹೊಸ ಮಸೂದೆ ರಾಜ್ಯಗಳ ಮೇಲೆ ಶೇ 40ರಷ್ಟು ಹಣದ ಹೊರೆಯಾಗಿ, ಅನುದಾನ ಹಾಗೂ ಕಾಮಗಾರಿಗಳಿಗೆ ಅಡ್ಡಿಯಾಗಲಿದೆ ಎಂದರು.

ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ನೀಡುವ ಪ್ರಮಾಣ ಹೆಚ್ಚಿದ್ದರೂ, ವಿತರಣೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಸಿ. ಜಗನ್ನಾಥ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಮಂಜುನಾಥ್ ಉಪಸ್ಥಿತರಿದ್ದರು.

ಗಾಂಧೀಜಿಗೆ ಅವಮಾನ; ಜನಪರ ಯೋಜನೆ ದುರ್ಬಲ

ನರೇಗಾ ಯೋಜನೆ ಹೆಸರನ್ನು ‘ವಿ.ಬಿ. ಜಿ ರಾಮ್ ಜೀ’ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧವಾಗಿ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಹೋರಾಟ ಆರಂಭಿಸಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯ ಸಾಧನೆ ಎಂದರೆ ಕಾಂಗ್ರೆಸ್ ಜಾರಿಗೆ ತಂದ ಜನಪರ ಯೋಜನೆಗಳ ಹೆಸರನ್ನು ಬದಲಿಸುವುದಷ್ಟೇ. ರೈತರು ಕಾರ್ಮಿಕರ ಹಿತಕ್ಕೆ ರೂಪಿಸಿದ್ದ ನರೇಗಾ ಯೋಜನೆಯ ಸ್ವರೂಪ ಬದಲಿಸಿ ಗಾಂಧೀಜಿಯ ಹೆಸರಿಗೆ ಅವಮಾನ ಮಾಡಲಾಗಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಜನರನ್ನು ಮೋಸಗೊಳಿಸಲಾಗುತ್ತಿದೆ. ರಾಮನ ಹೆಸರನ್ನು ಬಳಸಿಕೊಂಡು ಜನಪರ ಯೋಜನೆಗಳನ್ನು ದುರ್ಬಲಗೊಳಿಸುವುದು ಕ್ಷಮಾರ್ಹವಲ್ಲ.
–ಅಭಿಷೇಕ್ ದತ್ತ, ಎಐಸಿಸಿ ಕಾರ್ಯದರ್ಶಿ
10 ಸಾವಿರ ಜನರೊಂದಿಗೆ 5 ಕಿ.ಮೀ ಪಾದಯಾತ್ರೆ ನಡೆಯಲಿದ್ದು ಮಸೂದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲದು; ಗಾಂಧೀಜಿಯ ಹೆಸರಿಗೆ ಅವಮಾನ ಸಹಿಸುವುದಿಲ್ಲ.
–ಕೆ.ಎಚ್. ಮುನಿಯಪ್ಪ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.